ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತ ಸಸ್ಪೆನ್ಸ್ ಇದೀಗ ಮತ್ತಷ್ಟು ತೀವ್ರಗೊಂಡಿದ್ದು, ದೆಹಲಿಯಲ್ಲಿ ನಡೆದ ಸುದೀರ್ಘ ಹೈಕಮಾಂಡ್ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿರುವ ಸಾಧ್ಯತೆ ವ್ಯಕ್ತವಾಗಿದೆ.
ಮೂಲಗಳ ಪ್ರಕಾರ, ಸುಮಾರು 6 ಗಂಟೆಗಳ ಮ್ಯಾರಥಾನ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಸಭಾ ಸದಸ್ಯತ್ವ ಹಾಗೂ ರಾಷ್ಟ್ರ ರಾಜಕಾರಣಕ್ಕೆ ತೆರಳುವಂತೆ ಹೈಕಮಾಂಡ್ ಆಫರ್ ನೀಡಿದೆ ಎನ್ನಲಾಗಿದೆ. ಆದರೆ ಈ ಪ್ರಸ್ತಾವಕ್ಕೆ ಅವರು ತಕ್ಷಣ ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ.
ಸಭೆಯ ಬಳಿಕ ಬೆಂಗಳೂರಿಗೆ ವಾಪಸಾದ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರು ಹಾಗೂ ಶಾಸಕರೊಂದಿಗೆ ಜಾರ್ಜ್ ನಿವಾಸದಲ್ಲಿ ರಹಸ್ಯ ಚರ್ಚೆ ನಡೆಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಈ ವೇಳೆ ಸಿಎಂ ಸ್ಥಾನದಿಂದ ರಾಜೀನಾಮೆ ನೀಡುವ ಕುರಿತು ಚರ್ಚೆ ನಡೆದಿದ್ದು, ಆರಂಭದಲ್ಲಿ ಆಪ್ತರು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದರೆಂದು ಮೂಲಗಳು ತಿಳಿಸಿವೆ. ನಿಮ್ಮ ಪರವಾಗಿ ಹೈಕಮಾಂಡ್ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಆದರೆ ಸಿದ್ದರಾಮಯ್ಯ ಅವರು ಹೈಕಮಾಂಡ್ ನಿರ್ಧಾರವನ್ನು ನೇರವಾಗಿ ನಿರಾಕರಿಸಲು ಸಾಧ್ಯವಿಲ್ಲ ಎಂಬ ನಿಲುವು ವ್ಯಕ್ತಪಡಿಸಿ, ಅಗತ್ಯವಿದ್ದರೆ ರಾಜೀನಾಮೆ ನೀಡಲು ಸಿದ್ಧ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಈ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಅಧಿಕೃತ ಸ್ಪಷ್ಟೀಕರಣ ಬಂದಿಲ್ಲ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.



