HomeGadag Newsಕನ್ನೇರಿ ಸ್ವಾಮೀಜಿಯ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಿ

ಕನ್ನೇರಿ ಸ್ವಾಮೀಜಿಯ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಪ್ರಚೋದನಕಾರಿ ಹಾಗೂ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಕನ್ನೇರಿ ಸ್ವಾಮೀಜಿಯ ವಿರುದ್ಧ ಸ್ವಯಂಪ್ರೇರಿತ ಸುಮೋಟೊ ಪ್ರಕರಣ ದಾಖಲಿಸಬೇಕೆಂದು ಗದಗ ದಲಿತ ಸಂಘಟನೆಗಳ ಒಕ್ಕೂಟ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.
ಒಕ್ಕೂಟದ ಮುಖಂಡ ಮುತ್ತು ಬಿಳೆಯಲಿ ಪ್ರಕಟಣೆ ಮೂಲಕ ಈ ಆಗ್ರಹ ವ್ಯಕ್ತಪಡಿಸಿದ್ದು, “ಈ ಹಿಂದೆ ವಿಜಯಪುರ ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಕನ್ನೇರಿ ಸ್ವಾಮೀಜಿಯ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಆ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು” ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಸಾರ್ವಜನಿಕ ಭಾಷಣದಲ್ಲಿ ಮಿತಭಾಷೆ ಪಾಲಿಸಬೇಕು ಹಾಗೂ ಯಾವುದೇ ಸಮುದಾಯದ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಬಾರದು ಎಂದು ಸೂಚಿಸಿದ್ದರೂ, ಗದಗದಲ್ಲಿ ನಡೆದ ಸಮಾವೇಶದಲ್ಲಿ ಮತ್ತೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
“ಹಿಂದೂ ಸಮಾವೇಶದಲ್ಲಿ ಬೇರೆ ಧರ್ಮದ ವಿರುದ್ಧ ಜನರನ್ನು ಪ್ರಚೋದಿಸುವ ರೀತಿಯಲ್ಲಿ ಮಾತನಾಡಲಾಗಿದೆ. ಅಂತರಧರ್ಮೀಯ ವಿವಾಹಗಳ ವಿಚಾರವನ್ನು ಪ್ರಸ್ತಾಪಿಸಿ ‘ಲವ್ ಜಿಹಾದ್’ ಹೆಸರಿನಲ್ಲಿ ದ್ವೇಷದ ವಾತಾವರಣ ನಿರ್ಮಿಸುವ ಪ್ರಯತ್ನ ನಡೆದಿದೆ” ಎಂದು ಪ್ರಕಟಣೆಯಲ್ಲಿ ದೂರಲಾಗಿದೆ.
ಇದೇ ವೇಳೆ, ಜಾನಪದ ತಜ್ಞೆ ಹಾಗೂ ಬಸವಾನುಯಾಯಿ ಮೀನಾಕ್ಷಿ ಬಾಳಿ ಅವರ ಹೆಸರನ್ನು ಅವಹೇಳನಕಾರಿ ರೀತಿಯಲ್ಲಿ ಉಲ್ಲೇಖಿಸಿ ಸಾರ್ವಜನಿಕವಾಗಿ ಮಾನಹಾನಿ ಮಾಡಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.
ನಮ್ಮ ಎಚ್ಚರಿಕೆಯನ್ನು ಜಿಲ್ಲಾಡಳಿತ ನಿರ್ಲಕ್ಷಿಸಿತು
“ಕನ್ನೇರಿ ಸ್ವಾಮೀಜಿ ಗದಗ ಜಿಲ್ಲೆಗೆ ಬರುವ ಎರಡು ದಿನಗಳ ಮುಂಚೆಯೇ ‘ಸಮಾನತೆಗಾಗಿ ನಾವು’ ವೇದಿಕೆಯ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಅವರ ಪ್ರವೇಶಕ್ಕೆ ನಿರ್ಬಂಧ ಹೇರಬೇಕೆಂದು ಒತ್ತಾಯಿಸಿದ್ದೆವು. ಆದರೆ ಜಿಲ್ಲಾಡಳಿತ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ನಗರದ ಗಾಂಧಿ ವೃತ್ತದಲ್ಲಿ ನಡೆದ “ಸಾಮೂಹಿಕ ವಚನ ಪಠಣ ಹಾಗೂ ಸಂವಿಧಾನದ ಸಮಾನತೆಯ ಉದ್ಘೋಷ” ಕಾರ್ಯಕ್ರಮದ ಕುರಿತು ಕನ್ನೇರಿ ಸ್ವಾಮೀಜಿಗಳು ಮಾಡಿರುವ ಆರೋಪಗಳನ್ನು ಕೂಡ ಸಂಘಟನೆ ತಳ್ಳಿಹಾಕಿದೆ.
“ಆ ಕಾರ್ಯಕ್ರಮಕ್ಕೆ ನರೇಗಾ ಕಾರ್ಮಿಕರನ್ನು ಕರೆತಂದಿದ್ದಾರೆ ಎಂಬ ಆರೋಪವನ್ನು ಅವರು ಸಾಬೀತುಪಡಿಸಬೇಕು. ಇಲ್ಲವಾದರೆ ‘ಸಮಾನತೆಗಾಗಿ ನಾವು’ ವೇದಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಲಾಗಿದೆ.
ಕಾನೂನು ಕ್ರಮಕ್ಕೆ ಒತ್ತಾಯ
“ಗದಗ ಜಿಲ್ಲೆಯ ಕೋಮು ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಡಿ ಕನ್ನೇರಿ ಸ್ವಾಮೀಜಿಯ ವಿರುದ್ಧ ತಕ್ಷಣ ಸುಮೋಟೊ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು” ಎಂದು ಗದಗ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
 “ಸೌಹಾರ್ದತೆ ಹಾಳು ಮಾಡುವ ಯಾವುದೇ ದ್ವೇಷ ಭಾಷಣವನ್ನು ಸಮಾಜ ಸಹಿಸುವುದಿಲ್ಲ; ಕಾನೂನು ತನ್ನ ಕೆಲಸ ಮಾಡಬೇಕು.”
ಮುತ್ತು ಬಿಳೆಯಲಿ, ಗದಗ ದಲಿತ ಸಂಘಟನೆಗಳ ಒಕ್ಕೂಟ

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!