HomeGadag Newsಧರ್ಮ ಒಡೆಯುವ ಶಕ್ತಿಗಳ ವಿರುದ್ಧ ಹಿಂದೂ ಸಮಾಜ ಜಾಗೃತವಾಗಲಿ: ಕಾಡಸಿದ್ದೇಶ್ವರ ಸ್ವಾಮೀಜಿ

ಧರ್ಮ ಒಡೆಯುವ ಶಕ್ತಿಗಳ ವಿರುದ್ಧ ಹಿಂದೂ ಸಮಾಜ ಜಾಗೃತವಾಗಲಿ: ಕಾಡಸಿದ್ದೇಶ್ವರ ಸ್ವಾಮೀಜಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಬಸವಾದಿ ಶಿವಶರಣರು ಯಾವುದೇ ಒಂದು ಜಾತಿ ಅಥವಾ ಚೌಕಟ್ಟಿಗೆ ಸೀಮಿತರಾದವರಲ್ಲ. ಇಡೀ ಹಿಂದೂ ಧರ್ಮವನ್ನು ಶುದ್ಧೀಕರಣಗೊಳಿಸಿದ ಮಹಾಪುರುಷರು ಎಂದು ಕೊಲ್ಹಾಪುರದ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಹಿಂದೂ ಸರ್ವ ಸಮಾಜಗಳ ಒಕ್ಕೂಟದ ಆಶ್ರಯದಲ್ಲಿ ಭಾನುವಾರ ನಡೆದ “ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
“ಕಾರ್ಲ್ ಮಾರ್ಕ್ಸ್ ಸಿದ್ಧಾಂತದ ಅನುಯಾಯಿಗಳು ಇಂದು ಬಸವಣ್ಣನವರ ಹೆಸರಿನಲ್ಲಿ ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ. ಒಂದೇ ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವನ್ನಾಗಿ ಮಾಡಲು ಹೊರಟಿರುವ ಇಂತಹ ಶಕ್ತಿಗಳ ವಿರುದ್ಧ ಹಿಂದೂ ಸಮಾಜ ಜಾಗೃತವಾಗಬೇಕು” ಎಂದು ಕರೆ ನೀಡಿದರು.
“ಬಸವಣ್ಣನವರು ವೇದ, ಆಗಮ, ಪುರಾಣಗಳನ್ನು ಸಂಪೂರ್ಣ ತಿರಸ್ಕರಿಸಿದ್ದರು ಎಂಬುದು ತಪ್ಪು ಪ್ರಚಾರ. ಶರಣರ ವಚನಗಳಲ್ಲೇ ವೇದ-ಆಗಮಗಳ ಉಲ್ಲೇಖಗಳಿವೆ. ಬಸವಣ್ಣನವರು ‘ದೇವನೊಬ್ಬ ನಾಮ ಹಲವು’ ಎಂದು ಸಾರಿದವರು” ಎಂದು ಹೇಳಿದರು.
“ಸಮಗಾರ ಹರಳಯ್ಯ, ಹಡಪದ ಅಪ್ಪಣ್ಣ ಅವರ ಸಮಾಜದವರು ಇನ್ನೂ ಸಾಮಾಜಿಕವಾಗಿ ಹಿಂದುಳಿದಿರುವುದು ನೋವಿನ ಸಂಗತಿ. ಬಸವ ತತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ತಿಳಿಸಿದರು.
ಇಂದು ಒಂದೇ ಕುಟುಂಬದವರು ಒಟ್ಟಾಗಿ ಬದುಕುವುದು ಕಷ್ಟವಾಗಿರುವ ಸಂದರ್ಭದಲ್ಲಿ ಗದಗ ಜಿಲ್ಲೆಯ ೬೪ ಸಮಾಜಗಳು ಒಂದಾಗಿ ಸಮಾವೇಶ ನಡೆಸಿರುವುದು ದೇಶಕ್ಕೇ ಮಾದರಿಯಾಗಿದೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತರ ಸ್ಥಿತಿಗತಿಗಳ ಕುರಿತು ಮಾತನಾಡಿದ ಶ್ರೀಗಳು, “ಕೊರೋನಾ ಕಾಲದಲ್ಲೂ, ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದಾಗಲೂ ರೈತ ಹೊಲದಲ್ಲಿ ದುಡಿಯುತ್ತಿದ್ದ. ಅದರಿಂದಲೇ ದೇಶಕ್ಕೆ ಆಹಾರದ ಕೊರತೆ ಉಂಟಾಗಲಿಲ್ಲ. ಆದರೆ ಇಂದು ರೈತನ ಬದುಕು ಸಂಕಷ್ಟಕ್ಕೆ ಸಿಲುಕಿದೆ” ಎಂದು ಹೇಳಿದರು.
“ಪೆಟ್ರೋಲ್ ಬೆಲೆ ಏರಿಕೆಯಾದಾಗ ಮೌನವಾಗಿರುವ ಸಮಾಜ, ತರಕಾರಿ ಅಥವಾ ಈರುಳ್ಳಿ ಬೆಲೆ ಏರಿದರೆ ಮಾತ್ರ ಚರ್ಚೆ ಮಾಡುತ್ತದೆ. ರೈತರು ತಮ್ಮ ಹಕ್ಕುಗಳ ಬಗ್ಗೆ ಇನ್ನಷ್ಟು ಜಾಗೃತರಾಗಬೇಕು” ಎಂದು ಕರೆ ನೀಡಿದರು.
ಸಮಾವೇಶವನ್ನು ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಹರಿದ್ವಾರದಿಂದ ಆಗಮಿಸಿದ್ದ ಅಮೃತಾನಂದಜಿ ಮಹಾರಾಜ್ ಸೇರಿದಂತೆ ನೂರಕ್ಕೂ ಹೆಚ್ಚು ಮಠಾಧೀಶರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನರಗುಂದ ಶಾಸಕ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಎಚ್.ಎಸ್. ಶಿವನಗೌಡ್ರ, ರವಿ ದಂಡಿನ, ಕಿರಣ ಬೂಮಾ, ವೆಂಕಟೇಶ ಕುಲಕರ್ಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ವೇಳೆ ಡಾ. ಡಿ.ಎ. ಉಪಾಧ್ಯಾಯ ರಚಿಸಿರುವ “ಬಸವ ಶೈವದಲ್ಲಿ ಹಿಂದುತ್ವ” ಸಂಪುಟ-೨ ಹಾಗೂ ಡಾ. ಸಿ. ಶಿವಕುಮಾರ ಸ್ವಾಮೀಜಿ ರಚಿಸಿರುವ “ವಚನಾನುಸಂಧಾನ” ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು.
ಒಕ್ಕೂಟದ ಅಧ್ಯಕ್ಷ ವಸಂತಗೌಡ ಪೊಲೀಸಪಾಟೀಲ ಸ್ವಾಗತಿಸಿದರು. ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮೆರವಣಿಗೆಯಲ್ಲಿ ಮಹಿಳೆಯರ ಕುಂಭ ಮೆರಗು
ಸಮಾವೇಶಕ್ಕೂ ಮುನ್ನ ಭೂಮರೆಡ್ಡಿ ವೃತ್ತದಿಂದ ವಿದ್ಯಾದಾನ ಸಮಿತಿ ಮೈದಾನವರೆಗೆ ಬೃಹತ್ ಮೆರವಣಿಗೆ ನಡೆಯಿತು. ಸಾವಿರಾರು ಮಹಿಳೆಯರು ಕುಂಭ ಹೊತ್ತು ಸಾಗಿದ್ದು ವಿಶೇಷ ಗಮನ ಸೆಳೆಯಿತು.
ಅನೇಕ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ೧೦೦ಕ್ಕೂ ಹೆಚ್ಚು ಮಠಾಧೀಶರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
“ಬಸವ ತತ್ವವನ್ನು ವಿಭಜನೆಯ ಸಾಧನವಾಗಿಸದೆ, ಸಮಾಜದ ಏಕತೆಗೆ ಬಳಸಬೇಕಾಗಿದೆ.”
 ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿ ಮಠ

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!