ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಸಿನಿಮಾ ಬರಬೇಕಿತ್ತು ಎಂಬ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಅಪ್ಪುಗಾಗಿ ವಿಶೇಷವಾಗಿ ಸಿದ್ಧಪಡಿಸಿದ್ದ ಕಥೆಯನ್ನು ಈಗ ಯಾರಿಗೂ ಮಾಡಲು ಮನಸ್ಸಿಲ್ಲ ಎಂದು ಪ್ರಶಾಂತ್ ನೀಲ್ ಭಾವುಕರಾಗಿ ಹೇಳಿದ್ದು, ಅಭಿಮಾನಿಗಳ ಮನ ಮುಟ್ಟಿದೆ.
‘ಕೆಜಿಎಫ್’ ಸಿನಿಮಾ ಆರಂಭಕ್ಕೂ ಮುನ್ನವೇ ಪ್ರಶಾಂತ್ ನೀಲ್ ಒಂದು ಫ್ಯಾಮಿಲಿ ಡ್ರಾಮಾ ಕಥೆ ಸಿದ್ಧಪಡಿಸಿದ್ದರು. ಆ ಕಥೆಯನ್ನು ಪುನೀತ್ ರಾಜ್ಕುಮಾರ್ ಅವರನ್ನು ಗಮನದಲ್ಲಿಟ್ಟುಕೊಂಡೇ ಬರೆಯಲಾಗಿತ್ತು. ಹೊಂಬಾಳೆ ಫಿಲ್ಮ್ಸ್ ಎದುರು ಮೊದಲಿಗೆ ಇದೇ ಕಥೆ ಹೇಳಲಾಗಿತ್ತಾದರೂ, ನಂತರ ‘ಕೆಜಿಎಫ್’ ಕಥೆ ಕೇಳಿದ ನಿರ್ಮಾಪಕರು ಅದನ್ನೇ ಮೊದಲು ಕೈಗೆತ್ತಿಕೊಂಡಿದ್ದರು.
ಈ ಕುರಿತು ಮಾತನಾಡಿರುವ ಪ್ರಶಾಂತ್ ನೀಲ್, ‘ಆ ಕಥೆ ಸಂಪೂರ್ಣವಾಗಿ ಪುನೀತ್ ಸರ್ಗಾಗಿ ಮಾಡಿದ್ದೆ. ಅವರ ಅಗಲಿಕೆಯ ನಂತರ ಆ ಕಥೆಯನ್ನು ಮತ್ತಾರಿಗೂ ಮಾಡಲು ಸಾಧ್ಯವೆನಿಸಲಿಲ್ಲ. ಅವರ ಜೊತೆ ಆ ಕಥೆಯೂ ಹೋಗಿಬಿಟ್ಟಿತು’ ಎಂದು ಹೇಳಿದ್ದಾರೆ.
ಪುನೀತ್ ಜೊತೆ ಸಿನಿಮಾ ಮಾಡಲು ಆಗದೇ ಹೋದದ್ದೇ ತಮ್ಮ ವೃತ್ತಿಜೀವನದ ಅತಿ ದೊಡ್ಡ ಬೇಸರ ಎಂದು ನೀಲ್ ಹೇಳಿದ್ದಾರೆ. ಅಪ್ಪು ಅವರ ವ್ಯಕ್ತಿತ್ವ, ಸ್ಕ್ರೀನ್ ಪ್ರೆಸೆನ್ಸ್ ಮತ್ತು ಭಾವನಾತ್ಮಕ ತೂಕವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಕಥೆ ನಿರ್ಮಿಸಲಾಗಿತ್ತು ಎನ್ನಲಾಗಿದೆ.
ಪ್ರಸ್ತುತ ಪ್ರಶಾಂತ್ ನೀಲ್ ‘ಡ್ರ್ಯಾಗನ್’ ಸಿನಿಮಾದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಜೂನಿಯರ್ ಎನ್ಟಿಆರ್ ನಟನೆಯ ಈ ಚಿತ್ರದ ಗ್ಲಿಂಪ್ಸ್ ಈಗಾಗಲೇ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಸುಮಾರು 9 ನಿಮಿಷಗಳ ವಿಶೇಷ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.



