ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಮೀಸಲು ಅರಣ್ಯ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಅಂಬಾರಿ ಆನೆ ಅರ್ಜುನನ ಪ್ರತಿಮೆ ಇಂದು ಲೋಕಾರ್ಪಣೆಯಾಗಲಿದೆ.
ಈ ಮೊದಲು ಎರಡು ಬಾರಿ ಕಾರ್ಯಕ್ರಮ ಮುಂದೂಡಿಕೆಯಾಗಿದ್ದ ಹಿನ್ನೆಲೆಯಲ್ಲಿ ಇದೀಗ ಮೂರನೇ ಬಾರಿ ಲೋಕಾರ್ಪಣೆ ಸಮಾರಂಭ ಆಯೋಜಿಸಲಾಗಿದೆ.
ಇಂದು ಸಂಜೆ 4.30ಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಪ್ರತಿಮೆಯನ್ನು ಅನಾವರಣಗೊಳಿಸಲಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಶಾಸಕ ಸಿಮೆಂಟ್ ಮಂಜು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
2023ರ ಡಿಸೆಂಬರ್ 4ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮದಗಜದೊಂದಿಗೆ ನಡೆದ ಹೋರಾಟದಲ್ಲಿ ಅಂಬಾರಿ ಆನೆ ಅರ್ಜುನ ವೀರಮರಣ ಹೊಂದಿತ್ತು.
ಅದಾದ ಮರುದಿನ ಡಿಸೆಂಬರ್ 5ರಂದು ಮೃತಪಟ್ಟ ಸ್ಥಳದಲ್ಲೇ ಅರಣ್ಯ ಇಲಾಖೆ ಅಂತ್ಯಸಂಸ್ಕಾರ ನೆರವೇರಿಸಿತ್ತು. ಅರ್ಜುನನ ಸಾವಿಗೆ ಸುಮಾರು ಎರಡೂವರೆ ವರ್ಷಗಳಾದ ಬಳಿಕ ಇದೀಗ ಅದರ ಸ್ಮರಣಾರ್ಥ ನಿರ್ಮಿಸಲಾದ ಪ್ರತಿಮೆ ಸಾರ್ವಜನಿಕರಿಗೆ ಸಮರ್ಪಣೆಯಾಗುತ್ತಿದೆ.
ಇದರ ನಡುವೆ ಮಂಗಳವಾರ (ಮೇ 4) ಶಾಸಕ ಸಿಮೆಂಟ್ ಮಂಜು ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅರ್ಜುನನ ಪ್ರತಿಮೆ ನಿರ್ಮಾಣಗೊಂಡು ಒಂದೂವರೆ ವರ್ಷ ಕಳೆದರೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದರು.



