HomeCrime News₹2 ಲಕ್ಷದ ಕಾರಿನಲ್ಲಿ ಬಂದು ₹2 ಸಾವಿರ ಕದ್ದ ಕಳ್ಳರು; ಕೊನೆಗೂ ಪೊಲೀಸರ ಕೈಗೆ ಲಾಕ್!

₹2 ಲಕ್ಷದ ಕಾರಿನಲ್ಲಿ ಬಂದು ₹2 ಸಾವಿರ ಕದ್ದ ಕಳ್ಳರು; ಕೊನೆಗೂ ಪೊಲೀಸರ ಕೈಗೆ ಲಾಕ್!

For Dai;y Updates Join Our whatsapp Group

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾಳದಕಟ್ಟಾದ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಸಿದ್ದಾಪುರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ. ಸರಣಿ ಕಳ್ಳತನಕ್ಕೆ ಸಂಚು ರೂಪಿಸಿ ಬಂದಿದ್ದ ಅಂತರ ಜಿಲ್ಲಾ ಕಳ್ಳರ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 ಹಾಳದಕಟ್ಟಾ ಗ್ರಾಮದ ರಾಜು ಉಮೇಶ ಜಾಧವ್ ಅವರ ಮನೆಯಲ್ಲಿ ವಯಸ್ಸಾದ ತಾಯಿ ಹಾಗೂ ಮಾನಸಿಕ ಅಸ್ವಸ್ಥ ಸಹೋದರ ವಾಸವಾಗಿದ್ದರು. ಅಕ್ಟೋಬರ್ 3ರಂದು ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜು ಅವರು ಮನೆಗೆ ಬೀಗ ಹಾಕಿ, ತಾಯಿ ಮತ್ತು ಸಹೋದರನನ್ನು ತೊಗರ್ಸಿಗೆ ಕರೆದುಕೊಂಡು ತೆರಳಿದ್ದರು.

ಅಕ್ಟೋಬರ್ 5ರಂದು ಬೆಳಿಗ್ಗೆ ನೆರೆಹೊರೆಯವರು ಕರೆ ಮಾಡಿ ಮನೆಯ ಬಾಗಿಲು ತೆರೆದಿರುವ ಮಾಹಿತಿ ನೀಡಿದ್ದಾರೆ. ರಾಜು ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ, ಕಳ್ಳರು ಮನೆಯ ಮುಂಭಾಗದ ಬಾಗಿಲ ಬೀಗವನ್ನು ಆಯುಧದಿಂದ ಮೀಟಿ ಒಳಪ್ರವೇಶಿಸಿ, ಗೋದ್ರೇಜ್ ಲಾಕರ್ ಮುರಿದು ಒಳಗಿದ್ದ ₹2,000 ನಗದು ಹಣವನ್ನು ದೋಚಿ ಪರಾರಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ರಾಜು ಜಾಧವ್ ನೀಡಿದ ದೂರಿನನ್ವಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಜಿ., ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಪಿಐ ಜೆ.ಬಿ. ಸೀತಾರಾಮ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ನಾಗಪ್ಪ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

ವಿಶೇಷ ತಂಡವು ತೀವ್ರ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದೆ. ಬಂಧಿತರನ್ನು ಗದಗ ಜಿಲ್ಲೆಯ ಲಕ್ಷ್ಮೀಶ್ವರದ ಗೋವಿಂದಪ್ಪ (29), ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿಯ ಕೃಷ್ಣ (20) ಹಾಗೂ ಹುಬ್ಬಳ್ಳಿಯ ತಾರೆಹಾಳ ರಸ್ತೆಯ ಗಣೇಶ್ (22) ಎಂದು ಗುರುತಿಸಲಾಗಿದೆ.

ಬಂಧಿತರಿಂದ ₹330 ನಗದು ಹಾಗೂ ಸುಮಾರು ₹2 ಲಕ್ಷ ಮೌಲ್ಯದ ಸುಜುಕಿ ಸ್ವಿಫ್ಟ್ ಡಿಜೈರ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳಾದ ಗಂಗಪ್ಪ ಹಾಗೂ ಮಂಜು ಪರಾರಿಯಾಗಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

 ಬಂಧಿತ ಆರೋಪಿಗಳು ಹಳೆಯ ರೂಢಿಗತ ಅಪರಾಧಿಗಳಾಗಿದ್ದು, ಗದಗ, ಧಾರವಾಡ, ಉತ್ತರ ಕನ್ನಡ ಹಾಗೂ ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದರೋಡೆ, ಡಕಾಯಿತಿ, ಮನೆ ಕಳ್ಳತನ, ಕುರಿ ಕಳ್ಳತನ ಹಾಗೂ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ರಮೇಶ ಸಿ. ಕೂಡಲ, ಮಂಜಪ್ಪ ಟಿ., ಚೇತನ ಹಲಗೇರಿ, ರಾಜು ಎಂ., ವಿನಾಯಕ ಮಡಿವಾಳ, ನಾಗರಾಜ ತಿಮ್ಮಾಪುರ, ಮಣಿಕಂಠ ಬಿ.ಎನ್., ಅನೀಲ ನಾಯ್ಕ, ಸಂತೋಷ ತಳವಾರ, ರವಿ ಕ್ಯಾಲಕೊಂಡ, ಹೆಚ್.ಜಿ. ತಿಮ್ಮಪ್ಪ ಗೌಡ ಹಾಗೂ ಪ್ರಶಾಂತ ಅವರು ಭಾಗವಹಿಸಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img