HomeIndia News260 ಜೀವಗಳನ್ನು ಬಲಿ ಪಡೆದ ಅಹಮದಾಬಾದ್ ಏರ್ ಇಂಡಿಯಾ ದುರಂತಕ್ಕೆ ಇಂದಿಗೆ ಒಂದು ವರ್ಷ

260 ಜೀವಗಳನ್ನು ಬಲಿ ಪಡೆದ ಅಹಮದಾಬಾದ್ ಏರ್ ಇಂಡಿಯಾ ದುರಂತಕ್ಕೆ ಇಂದಿಗೆ ಒಂದು ವರ್ಷ

For Dai;y Updates Join Our whatsapp Group

Spread the love

ಅಹಮದಾಬಾದ್: ದೇಶವನ್ನೇ ಬೆಚ್ಚಿಬೀಳಿಸಿದ್ದ ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. 260 ಮಂದಿಯನ್ನು ಬಲಿತೆಗೆದುಕೊಂಡಿದ್ದ ಈ ಭೀಕರ ಅವಘಡದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂಬುದು ಗಮನಾರ್ಹವಾಗಿದೆ.

2025ರ ಜೂನ್ 12ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳಲು ಏರ್ ಇಂಡಿಯಾದ AI171 ವಿಮಾನ ಟೇಕ್‌ಆಫ್ ಆಗಿತ್ತು. ಮಧ್ಯಾಹ್ನ 1.38ಕ್ಕೆ ಹೊರಟಿದ್ದ 12 ವರ್ಷದ ಹಳೆಯ ಬೋಯಿಂಗ್ 787-8 ವಿಮಾನದಲ್ಲಿ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿ ಸೇರಿ ಒಟ್ಟು 242 ಮಂದಿ ಪ್ರಯಾಣಿಸುತ್ತಿದ್ದರು.

ಆದರೆ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಯಂತ್ರಣ ತಪ್ಪಿ ಅಹಮದಾಬಾದ್‌ನ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿತ್ತು. ಪರಿಣಾಮ ವಿಮಾನದಲ್ಲಿದ್ದ ಪೈಲಟ್ ಸೇರಿದಂತೆ 241 ಮಂದಿ ಹಾಗೂ ನೆಲದಲ್ಲಿದ್ದ 19 ಮಂದಿ ಸಾವನ್ನಪ್ಪಿ ಒಟ್ಟು 260 ಜನರು ದುರಂತಕ್ಕೆ ಬಲಿಯಾಗಿದ್ದರು.

ಘಟನೆ ನಡೆದು ಒಂದು ವರ್ಷ ಕಳೆದಿದ್ದರೂ ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ತಿಳಿಸುವ ಅಂತಿಮ ತನಿಖಾ ವರದಿ ಇನ್ನೂ ಪ್ರಕಟವಾಗಿಲ್ಲ. ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮಧ್ಯಂತರ ಪರಿಹಾರವಾಗಿ ತಲಾ 25 ಲಕ್ಷ ರೂಪಾಯಿ ನೀಡಲಾಗಿದ್ದು, ಇದುವರೆಗೆ ಶೇಕಡಾ 96ರಷ್ಟು ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದುರಂತದ ಮೊದಲ ವರ್ಷದ ಸ್ಮರಣಾರ್ಥವಾಗಿ ಮೃತಪಟ್ಟವರಿಗೆ ಗೌರವ ಸಲ್ಲಿಸಲು ಏರ್ ಇಂಡಿಯಾ ಸಿಬ್ಬಂದಿ ಇಂದು (ಜೂನ್ 12) ತಮ್ಮ ಕಾರ್ಯಸ್ಥಳಗಳಲ್ಲಿ ಮಧ್ಯಾಹ್ನ 1.39ರಿಂದ 1.41ರವರೆಗೆ ಎರಡು ನಿಮಿಷಗಳ ಮೌನಾಚರಣೆ ನಡೆಸಲಿದ್ದಾರೆ.

ಒಂದು ವರ್ಷ ಕಳೆದರೂ ಈ ದುರಂತದ ನೆನಪು ಇನ್ನೂ ಅನೇಕರ ಮನಸ್ಸಿನಲ್ಲಿ ಹಸಿರಾಗಿದ್ದು, ಮೃತರ ಕುಟುಂಬಗಳು ನ್ಯಾಯ ಮತ್ತು ಸಂಪೂರ್ಣ ತನಿಖಾ ವರದಿಗಾಗಿ ಕಾಯುತ್ತಿವೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!