ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಉದ್ಯೋಗ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಅಜೀವಿಕ ಮಿಷನ್ (ಗ್ರಾಮೀಣ) – ವಿಬಿ-ಜಿ ರಾಮ್ (ಜಿ) ಯೋಜನೆ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿದ್ದು, ಗದಗ ಜಿಲ್ಲೆಯಲ್ಲಿಯೂ ಯೋಜನೆ ಅನುಷ್ಠಾನಕ್ಕೆ ಸಿದ್ಧತೆಗಳು ಆರಂಭಗೊಂಡಿವೆ.
ಗ್ರಾಮೀಣ ಉದ್ಯೋಗ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಅಜೀವಿಕ ಮಿಷನ್ (ಗ್ರಾಮೀಣ) – ವಿಬಿ-ಜಿ ರಾಮ್ (ಜಿ) ಯೋಜನೆ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿದ್ದು, ಗದಗ ಜಿಲ್ಲೆಯಲ್ಲಿಯೂ ಯೋಜನೆ ಅನುಷ್ಠಾನಕ್ಕೆ ಸಿದ್ಧತೆಗಳು ಆರಂಭಗೊಂಡಿವೆ.
ಈ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ನಡೆಯಿತು. ರಾಜ್ಯ ಆಯುಕ್ತಾಲಯದಿಂದ ತರಬೇತಿ ಪಡೆದ ಮಾಸ್ಟರ್ ಟ್ರೈನರ್ಗಳಾದ ಸಂತೋಷ ಪಾಟೀಲ ಹಾಗೂ ಚಂದ್ರು ಲಮಾಣಿ ಅವರು ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಅವರ ನೇತೃತ್ವದಲ್ಲಿ ತರಬೇತಿ ನೀಡಿದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಸಿ.ಆರ್. ಮುಂಡರಗಿ, ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಅಕುಶಲ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಈ ಯೋಜನೆ ನೆರವಾಗಲಿದೆ ಎಂದು ತಿಳಿಸಿದರು.
ಮಾಸ್ಟರ್ ಟ್ರೈನರ್ ಚಂದ್ರು ಲಮಾಣಿ ಮಾತನಾಡಿ, ಯೋಜನೆಯಡಿ ಅಕುಶಲ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸುವ ಗ್ರಾಮೀಣ ಕುಟುಂಬಗಳ ವಯಸ್ಕ ಸದಸ್ಯರಿಗೆ ಒಂದು ಆರ್ಥಿಕ ವರ್ಷದಲ್ಲಿ 125 ದಿನಗಳ ಕಡ್ಡಾಯ ಉದ್ಯೋಗ ಖಾತ್ರಿ ನೀಡಲಾಗುತ್ತದೆ. ವಿಕಸಿತ ಗ್ರಾಮ ಪಂಚಾಯಿತಿ ಯೋಜನೆ (VGPP) ಮೂಲಕ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕಾಮಗಾರಿಗಳನ್ನು ಆಯ್ಕೆ ಮಾಡಿ ಅನುಷ್ಠಾನಗೊಳಿಸಲಾಗುವುದು. ಕುಟುಂಬಗಳ ನೋಂದಣಿ, ಉದ್ಯೋಗ ಅರ್ಜಿ ಸ್ವೀಕಾರ, ಕಾಮಗಾರಿ ನಿರ್ವಹಣೆ ಹಾಗೂ ದಾಖಲೆಗಳ ಸಂರಕ್ಷಣೆ ಸೇರಿದಂತೆ ಪ್ರಮುಖ ಜವಾಬ್ದಾರಿಗಳನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ ಎಂದು ವಿವರಿಸಿದರು.
ನರಗುಂದ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ಗ್ರಾ.ಉ.) ಹಾಗೂ ಮಾಸ್ಟರ್ ಟ್ರೈನರ್ ಸಂತೋಷ ಪಾಟೀಲ ಮಾತನಾಡಿ, ಜಲ ಭದ್ರತೆ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಜೀವನೋಪಾಯ ವೃದ್ಧಿ ಹಾಗೂ ಹವಾಮಾನ ವೈಪರೀತ್ಯ ಶಮನ ಕಾಮಗಾರಿಗಳಿಗೆ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ. ಸಮಗ್ರ ಡಿಜಿಟಲ್ ವ್ಯವಸ್ಥೆಯ ಮೂಲಕ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಯೋಜನೆ ಹೊಂದಿದೆ ಎಂದು ಹೇಳಿದರು.
2047ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ‘ವಿಕಸಿತ ಭಾರತ @2047’ ಗುರಿ ಸಾಧನೆಗೆ ಈ ಯೋಜನೆ ಮಹತ್ವದ ಹೆಜ್ಜೆಯಾಗಲಿದ್ದು, ಗ್ರಾಮೀಣ ಉದ್ಯೋಗ ಭದ್ರತೆ ಹಾಗೂ ಜೀವನೋಪಾಯ ವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಮುಂಡರಗಿ, ರೋಣ, ಗಜೇಂದ್ರಗಡ ಹಾಗೂ ನರಗುಂದ ತಾಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗಣಕಯಂತ್ರ ನಿರ್ವಾಹಕರು, ಬಿಎಫ್ಟಿ, ಜಿಕೆಎಂ, ತಾಲೂಕು ಪಂಚಾಯಿತಿ ನರೇಗಾ ಸಿಬ್ಬಂದಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
“ವಿಬಿ-ಜಿ ರಾಮ್ (ಜಿ) ಯೋಜನೆಯು ಗ್ರಾಮೀಣ ಉದ್ಯೋಗ ಭದ್ರತೆಯನ್ನು ಬಲಪಡಿಸುವುದರೊಂದಿಗೆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಕಲ್ಪಿಸಲಿದೆ.”
ಸಿ.ಆರ್. ಮುಂಡರಗಿ, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ



