HomeGadag Newsವಲಸೆ ತಡೆಯಲು 'ವ್ಹಿಬಿಜಿರಾಮ್' ಉದ್ಯೋಗದ ಭರವಸೆ

ವಲಸೆ ತಡೆಯಲು ‘ವ್ಹಿಬಿಜಿರಾಮ್’ ಉದ್ಯೋಗದ ಭರವಸೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರಗುಂದ: ಗ್ರಾಮೀಣ ಕೂಲಿಕಾರ್ಮಿಕರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಕಲ್ಪಿಸಿ ವಲಸೆ ತಡೆಯುವ ಉದ್ದೇಶದಿಂದ ಜುಲೈ 1ರಿಂದ ಜಾರಿಗೆ ಬಂದಿರುವ ವ್ಹಿಬಿಜಿರಾಮ್ (ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕಾ ಮಿಷನ್) ಯೋಜನೆಯಡಿ ವರ್ಷಕ್ಕೆ 125 ದಿನಗಳ ಉದ್ಯೋಗ ನೀಡಲಾಗುವುದು ಎಂದು ನರಗುಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ನಿರೀಕ್ಷಿತ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಕೂಲಿಕಾರ್ಮಿಕರು ವಲಸೆ ಹೋಗದಂತೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಉದ್ಯೋಗ ಬಯಸುವ ಕಾರ್ಮಿಕರು ತಮ್ಮ ಗ್ರಾಮ ಪಂಚಾಯಿತಿಗೆ ನಮೂನೆ–6ರಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಕೆಲಸ ನೀಡುವುದು ಗ್ರಾಮ ಪಂಚಾಯಿತಿಯ ಕರ್ತವ್ಯವಾಗಿದ್ದು, ನಿಗದಿತ ಅವಧಿಯಲ್ಲಿ ಕೆಲಸ ದೊರೆಯದಿದ್ದರೆ ನಿರುದ್ಯೋಗ ಭತ್ಯೆ ನೀಡಲು ಶಿಫಾರಸು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಯೋಜನೆಯಡಿ ಕಾಲುವೆ ಸ್ವಚ್ಛತೆ, ಕೆರೆ ಅಭಿವೃದ್ಧಿ, ಸಸಿ ನೆಡುವುದು, ಚರಂಡಿ ನಿರ್ಮಾಣ, ರಸ್ತೆ ಅಭಿವೃದ್ಧಿ ಸೇರಿದಂತೆ 318 ಬಗೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಪ್ರತಿ ಕೂಲಿಕಾರ್ಮಿಕರಿಗೆ ದಿನಕ್ಕೆ ₹382 ಕೂಲಿ ನೀಡಲಾಗುತ್ತಿದ್ದು, 125 ದಿನ ಕೆಲಸ ಮಾಡಿದರೆ ₹47,750 ಕೂಲಿ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈಗಾಗಲೇ ಇ-ಕೆವೈಸಿ ಪೂರ್ಣಗೊಳಿಸಿರುವ ಕಾರ್ಮಿಕರು ತಮ್ಮ ಕಾಯಕಬಂಧು (ಮೇಟ್) ಮೂಲಕ ಹೆಸರು ನೋಂದಾಯಿಸಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬೇಕು. ಹೊಸ ಗ್ರಾಮೀಣ ಉದ್ಯೋಗ ಕಾರ್ಡ್‌ಗಳು ವಿತರಿಸುವವರೆಗೆ ಹಳೆಯ ನರೇಗಾ ಜಾಬ್ ಕಾರ್ಡ್‌ಗಳೇ ಮಾನ್ಯವಾಗಿರಲಿದ್ದು, ಜಾಬ್ ಕಾರ್ಡ್ ಇಲ್ಲದ ಕುಟುಂಬಗಳು ಗ್ರಾಮ ಪಂಚಾಯಿತಿಯಲ್ಲಿ ಹೆಸರು ನೋಂದಾಯಿಸಿ ಹೊಸ ಕಾರ್ಡ್ ಪಡೆಯಬಹುದಾಗಿದೆ ಎಂದು ಶ್ರೀಧರ್ ಚಿನಗುಂಡಿ ತಿಳಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img