ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಅತಂತ್ರ ಸ್ಥಿತಿ ಮುಂದುವರಿದಿರುವ ಬೆನ್ನಲ್ಲೇ ನಟ ಕಮಲ್ ಹಾಸನ್ ಸಿಡಿದೆದ್ದಿದ್ದಾರೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿರುವ ಅವರು, ರಾಜ್ಯಪಾಲರ ವಿಳಂಬ ಧೋರಣೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಟಿವಿಕೆ 108 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಕಾಂಗ್ರೆಸ್ ಬೆಂಬಲದೊಂದಿಗೆ ಸಂಖ್ಯೆ 112ಕ್ಕೆ ಏರಿದೆ. ಆದರೂ ಬಹುಮತಕ್ಕೆ ಬೇಕಾದ 118 ಸಂಖ್ಯೆಯಿಂದ ಇನ್ನೂ 6 ಸ್ಥಾನ ದೂರದಲ್ಲಿದೆ. ಇದೇ ಕಾರಣಕ್ಕೆ ಸರ್ಕಾರ ರಚನೆ ಪ್ರಕ್ರಿಯೆ ಗೊಂದಲಕ್ಕೆ ಸಿಲುಕಿದೆ.
ಈ ಕುರಿತು ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಕಮಲ್ ಹಾಸನ್, “ಜನರು ಯಾರನ್ನೂ ಸಂಪೂರ್ಣ ಬಹುಮತದೊಂದಿಗೆ ಆಯ್ಕೆ ಮಾಡಿಲ್ಲ. ಆದರೆ ಅತಿದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ಕರೆಯದಿರುವುದು ಜನರ ಆದೇಶಕ್ಕೆ ಅವಮಾನ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬಹುಮತ ಪರೀಕ್ಷೆ ರಾಜಭವನದಲ್ಲಿ ಅಲ್ಲ, ವಿಧಾನಸಭೆಯಲ್ಲಿ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವವರು ತಮ್ಮ ಕರ್ತವ್ಯವನ್ನು ಮರೆಯಬಾರದು” ಎಂದು ಅವರು ರಾಜ್ಯಪಾಲರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಎಂ.ಕೆ. ಸ್ಟಾಲಿನ್ ಅವರನ್ನು ಉಲ್ಲೇಖಿಸಿದ ಕಮಲ್ ಹಾಸನ್, “ಜನರ ತೀರ್ಪನ್ನು ಗೌರವಿಸುತ್ತೇವೆ ಎಂದು ಹೇಳಿರುವ ಸ್ಟಾಲಿನ್ ಅವರ ನಿಲುವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದಿದೆ” ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಹೊಸ ರಾಜಕೀಯ ಅಲೆ ಎಬ್ಬಿಸಿರುವ ವಿಜಯ್, ಕೇವಲ ಎರಡು ವರ್ಷದಲ್ಲಿ ಪಕ್ಷವನ್ನು ಅಧಿಕಾರದ ಬಾಗಿಲಿಗೆ ತಂದು ನಿಲ್ಲಿಸಿದ್ದಾರೆ. ಈಗ ರಾಜ್ಯಪಾಲರ ನಿರ್ಧಾರವೇ ವಿಜಯ್ ರಾಜಕೀಯ ಭವಿಷ್ಯ ಮಾತ್ರವಲ್ಲ, ತಮಿಳುನಾಡಿನ ಮುಂದಿನ ಸರ್ಕಾರದ ದಿಕ್ಕನ್ನೂ ನಿರ್ಧರಿಸಲಿದೆ.



