ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮಂಗಳವಾರ ವೀರಕನ್ನಡಿಗ ಟಿಪ್ಪು ಸೇನೆಯಿಂದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರದ ಮೆರವಣಿಗೆಯ ಮೂಲಕ ರಾಜ್ಯೋತ್ಸವ ಆಚರಿಸಲಾಯಿತು.
ಪಟ್ಟಣದ ದೂದಪೀರಾಂ ದರ್ಗಾದಿಂದ ಕಿತ್ತೂರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ, ಜ್ಞಾನಪೀಠ ಪ್ರಶಸ್ತಿ ವಿಜೇತರ ಭಾವಚಿತ್ರದ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಮಾರ್ಗದಲ್ಲಿ ಮಾಡಲಾಯಿತು.
ಸಿಪಿಐ ಬಿ.ವಿ. ನ್ಯಾಮಗೌಡ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಕನ್ನಡ ಭಾಷೆ-ಸಂಸ್ಕೃತಿ, ನೆಲ-ಜಲದ ಸಂರಕ್ಷಣೆಯಲ್ಲಿ ನಮ್ಮೆಲ್ಲರ ಜವಾಬ್ದಾರಿಗಳ ಆತ್ಮಾವಲೋಕನವಾಗಬೇಕಿದೆ. ಕನ್ನಡ ನಮ್ಮ ಬದುಕಿನ, ಅನ್ನದ ಭಾಷೆಯಾಗಿ ನಿತ್ಯ ಜೀವನದಲ್ಲಿ ಬಳಕೆಯಾಗಬೇಕು. ಕನ್ನಡ ಭಾಷೆಗೆ ಯಾವುದೇ ಜಾತಿ-ಧರ್ಮದ ಹಂಗಿಲ್ಲ. ನಾವೆಲ್ಲ ಕನ್ನಡ ಮಾತೆಯ ಮಕ್ಕಳಾಗಿದ್ದು, ಕೇವಲ ನವೆಂಬರ್ ಕನ್ನಡಿಗರಾಗದೇ, ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ, ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗಿರುತ್ತೇನೆ ಎಂದು ಇದೇ ವೇಳೆ ದೃಢ ನಿರ್ಧಾರ ಮಾಡೋಣ ಎಂದರು.
ಟಿಪ್ಪು ಸೇನೆ ಸಂಘಟನೆಯ ಅಧ್ಯಕ್ಷ ಜಾಕೀರ ಹುಸೇನ ಹವಾಲ್ದಾರ ಮಾತನಾಡಿ, ಶ್ರೀಗಂಧದ ನಾಡು ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಈ ಸುಂದರ, ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ ಎಂದರು.
ಈ ವೇಳೆ ಅಂಜುಮನ್ ಕಮಿಟಿ ಅಧ್ಯಕ್ಷ ಎನ್.ಎಂ. ಗದಗ, ಮಹಮ್ಮದ ಕಾರಡಗಿ, ಹಜರತ್ ಪಟೇಲ್, ಜಮಾಲ್ ನದಾಫ್, ಸಾಧಿಕ್ ಬಾಗಲಕೋಟ, ಟಿಪ್ಪುಸುಲ್ತಾನ್ ಸೂರಣಗಿ, ರಿಯಾಜ್ ಮಕಂದಾರ, ಮುಸ್ತಾಕ್ ಗುತ್ತಲ, ಖಾಜಾ ನದಾಫ್, ಮಲೀಕ್ ಗುಡ್ಡದ, ಸಾಹಿಲ್ ಸವಣೂರ, ಅಖ್ತರ್ ಖಿಲ್ಲೆದಾರ, ಇಸ್ಮಾಯಿಲ್ ಆಡೂರ, ಗೌಸ ಜಮಖಂಡಿ, ಯುಸೂಫ್ ಚೌರಿ, ಇರ್ಫಾನ್ ಮಿರ್ಜಾ, ದಾದಾಪೀರ ಮುಚ್ಚಾಲೆ, ಖಳಂದರ್ ಸೂರಣಗಿ, ಬಾಬಾ ಕೊರಗಿ ಸೇರಿದಂತೆ ಉರ್ದು ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.


