ಬೆಂಗಳೂರು: ಐಪಿಎಲ್ ಫೈನಲ್ ಪಂದ್ಯವನ್ನು ಗುಜರಾತ್‌ಗೆ ಸ್ಥಳಾಂತರಿಸಿರುವ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಅಮಿತ್ ಶಾ ದುಡ್ಡು ಕೊಟ್ಟು ಮ್ಯಾಚ್ ನೋಡ್ತಾರಾ ಅಥವಾ ಉಚಿತವಾಗಿ ನೋಡ್ತಾರಾ?” ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ಕಿಡಿಕಾರಿದರು.
ಐಪಿಎಲ್ ಟಿಕೆಟ್‌ಗಾಗಿ ರಾಜಕೀಯ ಒತ್ತಡ ಬಂದ ಹಿನ್ನೆಲೆ ಪಂದ್ಯ ಸ್ಥಳಾಂತರವಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕರು ಅಥವಾ ಸಂಸದರು ಟಿಕೆಟ್ ಕೇಳಿದ್ದಾರೆ ಎನ್ನುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.
ಮೊದಲು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಈ ವಿಷಯ ಪ್ರಸ್ತಾಪಿಸಿದ್ದರು. ಬಳಿಕ ಎಲ್ಲರೂ ಅದಕ್ಕೆ ಧ್ವನಿಗೂಡಿಸಿದ್ದರು. ಹೀಗಾಗಿ ಇದನ್ನು ರಾಜಕೀಯವಾಗಿ ತಿರುಗಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಟಿಕೆಟ್ ನೀಡುವುದು ತಪ್ಪು ಎಂದು ಕೆಲವರು ಹೇಳುತ್ತಿದ್ದಾರೆ. ಈಗಾಗಲೇ ಐದಾರು ಪಂದ್ಯಗಳು ನಡೆದಿವೆ. ಅವು ಹೇಗೆ ನಡೆದವು ಎಂಬುದನ್ನು ಪ್ರಶ್ನಿಸಬೇಕು. ಈಗ ಹೆಚ್ಚಿನ ಲಾಭಕ್ಕಾಗಿ ಪಂದ್ಯವನ್ನು ಗುಜರಾತ್‌ಗೆ ಕರೆದೊಯ್ಯಲಾಗಿದೆ ಎಂದು ಆರೋಪಿಸಿದರು.
ಸದನದಲ್ಲೇ ಬಿಜೆಪಿ ವಿರೋಧ ಪಕ್ಷದ ನಾಯಕರೇ ಐಪಿಎಲ್ ಟಿಕೆಟ್ ಕೇಳಿದ್ದರು. ಹಾಗಾದರೆ ಪಂದ್ಯ ಸ್ಥಳಾಂತರಕ್ಕೆ ಬಿಜೆಪಿಯೇ ಕಾರಣವೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.
ರಾಜ್ಯಕ್ಕೆ ಬಂಡವಾಳ ಹೂಡಿಕೆ ವಿಚಾರದಲ್ಲಿ ಅನ್ಯಾಯ ಮಾಡಿದಂತೆಯೇ, ಈಗ ಕ್ರೀಡಾ ಕ್ಷೇತ್ರದಲ್ಲಿಯೂ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭದ್ರತೆ ವಿಷಯದಲ್ಲಿ ಶಾಸಕರು ಅಥವಾ ಸಂಸದರ ಯಾವುದೇ ಒತ್ತಡ ಇರಲಿಲ್ಲ. ಯಾರು ಇ-ಮೇಲ್ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಪಂದ್ಯವನ್ನು ಮುಂಬೈನಲ್ಲಿ ನಡೆಸಬಹುದಾಗಿತ್ತು. ಆದರೂ ಗುಜರಾತ್‌ಗೆ ಏಕೆ ಸ್ಥಳಾಂತರ ಮಾಡಲಾಗಿದೆ ಎಂಬುದನ್ನು ಪ್ರಶ್ನಿಸಬೇಕು ಎಂದರು.
ಎಲ್ಲ ಪ್ರಮುಖ ಪಂದ್ಯಗಳನ್ನೂ ಗುಜರಾತ್‌ಗೆ ಕರೆದೊಯ್ಯುತ್ತಿರುವುದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೂ ಖಂಡಿಸಿದ್ದಾರೆ ಎಂದು ಹೇಳಿದರು.



