ಬೆಂಗಳೂರು: ಮನೆಯಲ್ಲೇ ಗಾಂಜಾ ಮಾರಾಟ ಮಾಡುತಿದ್ದ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಬ್ಯಾಟರಾಯನಪುರದ ಶಾಮಣ್ಣ ಗಾರ್ಡನ್ ನಿವಾಸಿ ಅಕ್ಬರ್ ಷರೀಫ್ ಬಂಧಿತ ಆರೋಪಿಯಾಗಿದ್ದು,
ದಾಳಿ ವೇಳೆ 771 ಗ್ರಾಂ ಗಾಂಜಾ, 237 ಮೊಬೈಲ್, 18 ಮಾರ್ಕಸ್ತ್ರಗಳು ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಆರೋಪಿಯ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಗಾಂಜಾ ಸಂಗ್ರಹ ಹಾಗೂ ಮಾರಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ತನಿಖೆ ವೇಳೆ ಆರೋಪಿ ಅಕ್ಬರ್ ಷರೀಫ್ ತನ್ನ ಕುಟುಂಬದ ಸದಸ್ಯರ ಸಹಕಾರದೊಂದಿಗೆ ಮನೆಯಿಂದಲೇ ಗಾಂಜಾ ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಗಾಂಜಾ ಖರೀದಿಸಲು ಬಂದ ಕೆಲವರು ಹಣದ ಬದಲಾಗಿ ಮೊಬೈಲ್ ಫೋನ್ಗಳನ್ನು ನೀಡುತ್ತಿದ್ದು, ಆರೋಪಿ ಅವುಗಳನ್ನು ಸ್ವೀಕರಿಸಿ ಗಾಂಜಾ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಆರೋಪಿಯ ಮನೆಯಲ್ಲಿ 237 ಮೊಬೈಲ್ಗಳು ಪತ್ತೆಯಾಗಿವೆ.
ಇದೇ ವೇಳೆ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಆರೋಪಿ 18 ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಅಕ್ಬರ್ ಷರೀಫ್ ವಿರುದ್ಧ ಈ ಹಿಂದೆಯೂ ನಾಲ್ಕು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಇದೀಗ ಮತ್ತೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.



