ವಿಜಯಪುರ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ವಿಚಾರವಾಗಿ ವಿಜಯಪುರದಲ್ಲಿ ನಡೆಯುತ್ತಿರುವ ಜಟಾಪಟಿ ಮತ್ತಷ್ಟು ತೀವ್ರಗೊಂಡಿದ್ದು, ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಜಲನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿಜಯಪುರದ ಬಾಗವಾನ ಕಾಲೋನಿ ನಿವಾಸಿ ಹಾಗೂ ವ್ಯಾಪಾರಿ ಅಬ್ದುಲ್ ರಜಾಕ್ ಮೌಲಾಸಾಬ್ ಬಾಗವಾನ (50) ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ತಾವು ಜೀವಂತವಾಗಿದ್ದರೂ ಮೃತಪಟ್ಟಿದ್ದಾರೆ ಎಂದು ಬಿಂಬಿಸಿ, ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕಲು ಪ್ರಯತ್ನಿಸಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನ ಪ್ರಕಾರ, ಶಾಸಕರ ಲೆಟರ್‌ಹೆಡ್‌ನಲ್ಲಿ ಮರಣ ಪ್ರಮಾಣಪತ್ರದ ದಾಖಲೆಯನ್ನು ಲಗತ್ತಿಸಿ, ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಸಲ್ಲಿಸಲಾಗಿದೆ ಎಂದು ಅಬ್ದುಲ್ ರಜಾಕ್ ಆರೋಪಿಸಿದ್ದಾರೆ. ಈ ಪತ್ರವನ್ನು 2026ರ ಸೆಪ್ಟೆಂಬರ್ 3ರಂದು ಪಾಲಿಕೆಗೆ ಸಲ್ಲಿಸಲಾಗಿದೆ ಎಂದು ಪೊಲೀಸ್ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಮಾಹಿತಿ ಪಡೆದ ಬಳಿಕ ಅಬ್ದುಲ್ ರಜಾಕ್ ಅವರು ಅಕ್ಟೋಬರ್ 8ರಂದು ಜಲನಗರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಯಾವ ಸೆಕ್ಷನ್‌ಗಳಡಿ ಪ್ರಕರಣ?
ಜಲನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 137/2026ರಂತೆ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 318(4), 336(3) ಮತ್ತು 340(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ದಾಖಲೆಯಲ್ಲಿ ಬಸನಗೌಡ ರಾಮನಗೌಡ ಪಾಟೀಲ್ ಅಲಿಯಾಸ್ ಯತ್ನಾಳ್ ಅವರನ್ನು ಆರೋಪಿಯಾಗಿ ನಮೂದಿಸಲಾಗಿದೆ.
SIR ಪ್ರಕ್ರಿಯೆಯಲ್ಲಿ ಜೀವಂತ ಮತದಾರರ ಹೆಸರನ್ನು ಮೃತರೆಂದು ತೋರಿಸಿ ತೆಗೆದುಹಾಕಲು ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ಆರೋಪಗಳು ಈಗಾಗಲೇ ವಿಜಯಪುರದಲ್ಲಿ ಚರ್ಚೆಗೆ ಕಾರಣವಾಗಿದ್ದವು. ಅಬ್ದುಲ್ ರಜಾಕ್ ಬಾಗವಾನ ಅವರ ಪ್ರಕರಣವೂ ಇದೇ ವಿವಾದದ ಭಾಗವಾಗಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸ್ ದಾಖಲೆ ಆಧಾರದಲ್ಲಿ ತನಿಖೆ ಮುಂದುವರಿದಿದ್ದು, ದೂರಿನಲ್ಲಿ ಮಾಡಿರುವ ಆರೋಪಗಳು ತನಿಖೆಯಲ್ಲಿ ದೃಢಪಡಬೇಕಿದೆ.



