ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಬಸವರಾಜ್ ಕನ್ನಾಳೆಯನ್ನು 14 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ 4ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ.
ಇಂದು ಬಸವರಾಜ್ ಕನ್ನಾಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಇಡಿ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಇಡಿ ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಬಸವರಾಜ್ ಕನ್ನಾಳೆಯನ್ನು 14 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಇನ್ನು ತನಿಖೆ ವೇಳೆ ಬಸವರಾಜ್ ಕನ್ನಾಳೆ ಬರೆದಿಟ್ಟಿದ್ದ ಡೈರಿಯಲ್ಲಿನ ಹಣದ ವ್ಯವಹಾರದ ಮಾಹಿತಿಗಳು ಪತ್ತೆಯಾಗಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಎಂಟು ಅಭ್ಯರ್ಥಿಗಳಿಂದ ಬರಬೇಕಿದ್ದ ಹಣದ ವಿವರಗಳನ್ನು ಕನ್ನಾಳೆ ಡೈರಿಯಲ್ಲಿ ದಾಖಲಿಸಿದ್ದಾನೆ ಎನ್ನಲಾಗಿದೆ. ಮಂಜುನಾಥ್, ಪೂಜಾ, ಅಶ್ವಿನಿ ಕುಮಾರ್, ಮೋಹನ್ ಕುಮಾರ್, ಸಂಗಮೇಶ್, ಪದ್ಮಾವತಿ ಹಾಗೂ ಹರೀಶ್ ಸೇರಿದಂತೆ ಹಲವರ ಹೆಸರುಗಳು ಡೈರಿಯಲ್ಲಿ ನಮೂದಾಗಿವೆ.
ಮಂಜುನಾಥ್, ಪೂಜಾ, ಅಶ್ವಿನಿ ಕುಮಾರ್, ಸಂಗಮೇಶ್, ಪದ್ಮಾವತಿ ಮತ್ತು ಹರೀಶ್ ಅವರಿಂದ ತಲಾ 10 ಲಕ್ಷ ರೂಪಾಯಿ ಹಾಗೂ ಮೋಹನ್ ಕುಮಾರ್ ಅವರಿಂದ 5 ಲಕ್ಷ ರೂಪಾಯಿ ಬಾಕಿ ಬರಬೇಕಿದೆ ಎಂದು ಡೈರಿಯಲ್ಲಿ ದಾಖಲಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇಡಿ ತಿಳಿಸಿದೆ.
ಈ ಎಲ್ಲಾ ವಿಚಾರಗಳ ಕುರಿತು ಬಸವರಾಜ್ ಕನ್ನಾಳೆಯಿಂದ ಹೆಚ್ಚಿನ ಮಾಹಿತಿ ಪಡೆಯಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ.



