ಮಾಸ್ಕೋ: ರಷ್ಯಾದಲ್ಲಿ ಭೀಕರ ಘಟನೆಯೊಂದು ಸಂಭವಿಸಿದ್ದು, ಪ್ರಯೋಗಾಲಯದಲ್ಲಿ ಪರೀಕ್ಷಾ ಕೊಳವೆ (Test Tube) ಆಕಸ್ಮಿಕವಾಗಿ ಒಡೆದು ಮಾರಕ ‘ನ್ಯುಮೋನಿಕ್ ಪ್ಲೇಗ್’ (Pneumonic Plague) ರೋಗಕ್ಕೆ ಸಂಶೋಧಕಿಯೊಬ್ಬರು ಬಲಿಯಾಗಿದ್ದಾರೆ.
ಘಟನೆ ವರದಿಯಾದ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಐದು ಆಸ್ಪತ್ರೆಗಳನ್ನು ಬಂದ್ ಮಾಡಲಾಗಿದ್ದು, 200ಕ್ಕೂ ಹೆಚ್ಚು ಜನರನ್ನು ತಕ್ಷಣವೇ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಸೈಬೀರಿಯನ್ ಪ್ರದೇಶವಾದ ಇರ್ಕುಟ್ಸ್ಕ್‌ನ ಶೆಲೆಖೋವ್‌ನಲ್ಲಿರುವ ‘ಆಂಟಿ-ಪ್ಲೇಗ್ ರಿಸರ್ಚ್ ಇನ್‌ಸ್ಟಿಟ್ಯೂಟ್’ನಲ್ಲಿ 28 ವರ್ಷದ ಪ್ರಯೋಗಾಲಯ ತಂತ್ರಜ್ಞೆ ದಾರಿಯಾ ಶಿಪಿಲೋವಾ ಈ ರೋಗಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ.
ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸುವಾಗ ಜೀವಂತ ಬ್ಯಾಕ್ಟೀರಿಯಾವನ್ನು ಹೊಂದಿದ್ದ ಪರೀಕ್ಷಾ ಕೊಳವೆ ಆಕಸ್ಮಿಕವಾಗಿ ಒಡೆದು ಈ ದುರಂತ ಸಂಭವಿಸಿದೆ. ನ್ಯುಮೋನಿಕ್ ಪ್ಲೇಗ್ ಅತ್ಯಂತ ವೇಗವಾಗಿ ಹರಡುವ ಮಾರಣಾಂತಿಕ ಕಾಯಿಲೆಯಾಗಿದ್ದು, ಆರಂಭಿಕ ಹಂತದಲ್ಲಿ ಚಿಕಿತ್ಸೆ ಲಭಿಸದಿದ್ದರೆ ಪ್ರಾಣಕ್ಕೆ ಕಂಠಕವಾಗಲಿದೆ.
ತೀವ್ರ ನ್ಯುಮೋನಿಯಾ ಲಕ್ಷಣಗಳಿಂದ ಬಳಲುತ್ತಿದ್ದ ದಾರಿಯಾ ಶಿಪಿಲೋವಾ ಅವರನ್ನು ಸೆಪ್ಟೆಂಬರ್ 29 ರಂದು ಶೆಲೆಖೋವ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಅಕ್ಟೋಬರ್ 1 ರಂದು ಅವರು ಮೃತಪಟ್ಟಿದ್ದಾರೆ.
ಮೃತ ಸಂಶೋಧಕಿಯ ಸಂಪರ್ಕಕ್ಕೆ ಬಂದಿರಬಹುದಾದ 200ಕ್ಕೂ ಹೆಚ್ಚು ಜನರನ್ನು ಗುರುತಿಸಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಸೋಂಕು ಮತ್ತಷ್ಟು ಹರಡದಂತೆ ತಡೆಯಲು ಇರ್ಕುಟ್ಸ್ಕ್ ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.



