ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸ್ವಾಮೀಜಿಯನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ.2022ರ ಆಗಸ್ಟ್ 26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
3 ವರ್ಷಗಳ ಸುದೀರ್ಘ ತನಿಖೆ ಬಳಿಕ ಚಿತ್ರದುರ್ಗದ 2ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯದ ನ್ಯಾ.ಗಂಗಾಧರಪ್ಪ ಚನ್ನಬಸಪ್ಪ ಹಡಪದ್ ಅವರಿದ್ದ ಪೀಠ ನಿರ್ದೋಷಿ ಅಂತ ತೀರ್ಪು ಪ್ರಕಟಿಸಿದೆ. ಇದರೊಂದಿಗೆ ಮೊದಲ ಪ್ರಕರಣ ಖುಲಾಸೆಯಾಗಿದೆ.
ಏನಿದು ಪ್ರಕರಣ?
ಚಿತ್ರದುರ್ಗದಲ್ಲಿರುವ ಮುರುಘಾ ಮಠದ ಪೀಠಾಧಿಪತಿಯಾಗಿದ್ದ ಶಿವಮೂರ್ತಿ ಸ್ವಾಮೀಜಿ ವಿರುದ್ಧ ಪೋಕ್ಸ್ ಪ್ರಕರಣ ದಾಖಲಾಗಿತ್ತು. 2022ರ ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮುರುಘಾ ಮಠದ ವಸತಿ ನಿಲಯದಲ್ಲಿದ್ದ ಇಬ್ಬರು ಅಪ್ರಾಪ್ತೆಯರ ಹೇಳಿಕೆಯನ್ನಾಧರಿಸಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಎ1 ಮುರುಘಾಶ್ರೀ, ಎ2 ಲೇಡಿ ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ ವಿರುದ್ಧ ಕೇಸ್ ದಾಖಲಾಗಿತ್ತು. ನಂತರ ಆಗಸ್ಟ್ 26ರಂದು ಮೈಸೂರಿನಿಂದ ಚಿತ್ರದುರ್ಗಕ್ಕೆ ಪ್ರಕರಣ ವರ್ಗಾವಣೆಯಾಗಿತ್ತು.2022ರ ಸೆಪ್ಟೆಂಬರ್ 1ರಂದು ಮುರುಘಾ ಶ್ರೀ ಬಂಧನವಾಗಿತ್ತು. ಸುಮಾರು 14 ತಿಂಗಳ ಕಾಲ ಜೈಲಿನಲ್ಲಿದ್ದರು. ಸ್ವಾಮೀಜಿ ಬಂಧನದ ಬಳಿಕ ಇಡೀ ದೇಶದಾದ್ಯಂತ ಪ್ರಕರಣ ಸದ್ದು ಮಾಡಿತ್ತು.



