ಬೆಂಗಳೂರು: ಸಿನಿಮಾ ಕಾರ್ಯಕ್ರಮವೊಂದರಲ್ಲಿ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ನಿರ್ದೇಶಕ ಪ್ರೇಮ್ ವಿರುದ್ಧ ‘ಹಣ ಪಡೆದು ಸಿನಿಮಾ ಮಾಡಿಕೊಡಲಿಲ್ಲ’ ಎಂಬರ್ಥದ ಆರೋಪಗಳನ್ನು ಮಾಡಿದ್ದ ವಿಚಾರ ಇದೀಗ ತೀವ್ರ ತಿರುವು ಪಡೆದುಕೊಂಡಿದೆ. ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಯಾಗಿ ನಿರ್ದೇಶಕ ಪ್ರೇಮ್ ಅವರು ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್‌ಗೆ ಅಧಿಕೃತ ದೂರು ನೀಡಿದ್ದಾರೆ.
ಫಿಲಂ ಚೇಂಬರ್‌ಗೆ ಖುದ್ದಾಗಿ ತೆರಳಿದ ಪ್ರೇಮ್, ಅಧ್ಯಕ್ಷೆ ಜಯಮಾಲ ಅವರನ್ನು ಭೇಟಿಯಾಗಿ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ದೂರಿನಲ್ಲಿ ತಮ್ಮ ವೃತ್ತಿಜೀವನದ ಹಿನ್ನೆಲೆಯನ್ನು ವಿವರಿಸಿರುವ ಅವರು, 25 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದ್ದು, ತಮ್ಮ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರೇಮ್ ಅವರ ಪ್ರಕಾರ, 2004ರಲ್ಲಿ ನಿರ್ಮಾಪಕ ಆರ್.ಎಸ್. ಶ್ರೀನಿವಾಸ್ ಅವರು ಸಿನಿಮಾ ನಿರ್ದೇಶನ ಮಾಡುವಂತೆ ಕೇಳಿಕೊಂಡು ₹9 ಲಕ್ಷ ಮುಂಗಡ ಹಣ ನೀಡಿದ್ದಾರೆ. ಆ ಬಳಿಕ ನಿರ್ಮಾಪಕರಿಗಾಗಿ ವಿಶೇಷ ಆಫೀಸ್ ತೆರೆಯಲಾಗಿದ್ದು, ತಂಡ ರಚಿಸಿ ಕಥೆ ಹಾಗೂ ಚಿತ್ರಕಥೆ ಬರವಣಿಗೆ ಪೂರ್ಣಗೊಳಿಸಲಾಗಿದೆ. ಆದರೆ ನಂತರ ನಿರ್ಮಾಪಕರಿಂದ ಯಾವುದೇ ಪ್ರತಿಕ್ರಿಯೆ ಸಿಗದೇ, ಒಂದು ವರ್ಷಕ್ಕೂ ಹೆಚ್ಚು ಕಾಲ ಚಿತ್ರ ಯೋಜನೆ ಸ್ಥಗಿತಗೊಂಡಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಅವಧಿಯಲ್ಲಿ ಆಫೀಸ್ ಹಾಗೂ ತಂಡದ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಿದ್ದು, ಇದರಿಂದ ₹15 ರಿಂದ ₹20 ಲಕ್ಷದವರೆಗೆ ವೈಯಕ್ತಿಕ ನಷ್ಟ ಅನುಭವಿಸಿದ್ದೇನೆ. ಅಲ್ಲದೇ, ಈ ಕಾರಣದಿಂದಾಗಿ ಬೇರೆ ನಿರ್ಮಾಪಕರಿಂದ ಬಂದಿದ್ದ ಹಲವು ಅವಕಾಶಗಳನ್ನು ಕಳೆದುಕೊಂಡು ಕೋಟಿಗಟ್ಟಲೆ ನಷ್ಟ ಎದುರಿಸಬೇಕಾಯಿತು ಎಂದು ಪ್ರೇಮ್ ಆರೋಪಿಸಿದ್ದಾರೆ.
ಇನ್ನೊಂದೆಡೆ, ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಕಾರ್ಯಕ್ರಮವೊಂದರಲ್ಲಿ ಪ್ರೇಮ್ ಜೊತೆ ಸಿನಿಮಾ ಮಾಡಿದವರು ಹಣ ಕಳೆದುಕೊಂಡಿದ್ದಾರೆ, ಆದರೆ ಪ್ರೇಮ್ ಮಾತ್ರ ಚೆನ್ನಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗಳೇ ತಮ್ಮ ಗೌರವಕ್ಕೆ ಧಕ್ಕೆ ತಂದಿವೆ ಎಂದು ಪ್ರೇಮ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣ ಇದೀಗ ಫಿಲಂ ಚೇಂಬರ್ ಮಟ್ಟಕ್ಕೆ ತಲುಪಿದ್ದು, ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.



