ಗದಗ: ನಗರದ ಜುಮ್ಮಾ ಮಸೀದಿ ಸಮೀಪ ಇಂದು ಬೆಳ್ಳಂಬೆಳಿಗ್ಗೆ ಸ್ಕೂಟಿಗೆ ಅಚಾನಕ್ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ನೋಡ ನೋಡುತ್ತಿದ್ದಂತೆ ಸ್ಕೂಟಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಹೋಗಿದೆ.
ಬೆಂಕಿಗೀಡಾದ ಸ್ಕೂಟಿ ಚಿನ್ನದ ಅಂಗಡಿ ಮಾಲೀಕರೊಬ್ಬರಿಗೆ ಸೇರಿದ್ದಾಗಿ ತಿಳಿದು ಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಘಟನೆ ನಡೆದ ಸ್ಥಳ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.



