ತುಮಕೂರು: ಜಿಲ್ಲೆಯ ಗ್ರಾಮಾಂತರ ಪ್ರದೇಶದ ಗೂಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ದುರ್ಘಟನೆ ಶಿಕ್ಷಣ ವ್ಯವಸ್ಥೆಯ ಸುರಕ್ಷತೆ ಪ್ರಶ್ನಾರ್ಥಕವಾಗಿಸಿದೆ. ಫೆಬ್ರವರಿ 9ರಂದು ಮಧ್ಯಾಹ್ನದ ಬಿಸಿಯೂಟ ವೇಳೆ ಒಂದನೇ ತರಗತಿ ವಿದ್ಯಾರ್ಥಿನಿ ಚಿನ್ಮಯಿದೇವಿ ಬಲಗೈಯ ಎರಡು ಬೆರಳುಗಳನ್ನು ಕಳೆದುಕೊಂಡಿದ್ದಾಳೆ.
ಸಾಲಿನಲ್ಲಿ ನಿಂತಿದ್ದ ಬಾಲಕಿ ಮೂರನೇ ತರಗತಿ ಕೊಠಡಿಯ ಬಾಗಿಲಿಗೆ ಕೈ ಇಟ್ಟಿದ್ದಾಗ ಮತ್ತೊಬ್ಬ ವಿದ್ಯಾರ್ಥಿ ಬಾಗಿಲು ತಳ್ಳಿದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಗಂಭೀರ ಗಾಯವಾಗಿದ್ದರೂ ಕೂಡ ತಕ್ಷಣ ಆಸ್ಪತ್ರೆಗೆ ಕರೆದೊಯ್ಯದೆ ಕೇವಲ ನೀರು ಸುರಿದು ಬ್ಯಾಂಡೇಜ್ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬಾಲಕಿಯ ಪೋಷಕರು ಗಾರೆ ಕೆಲಸ ಮಾಡುವವರಾಗಿದ್ದು, ಶಿಕ್ಷಕರನ್ನು ಪ್ರಶ್ನಿಸಿದಾಗ ನಿರ್ಲಕ್ಷ್ಯ ತೋರಲಾಗಿದ್ದು, 2000 ರೂಪಾಯಿ ಫೋನ್ ಪೇ ಮೂಲಕ ಕಳುಹಿಸಲಾಗಿದೆ ಎನ್ನುವ ವಿಷಯವೂ ಹೊರಬಂದಿದೆ. ಜಿಲ್ಲಾ ಆಸ್ಪತ್ರೆಯ ವೈದ್ಯರು ಕಟ್ ಆದ ಬೆರಳುಗಳನ್ನು ತಂದುಕೊಟ್ಟರೆ ಮರುಜೋಡಣೆ ಸಾಧ್ಯವೆಂದು ಹೇಳಿದ್ದರೂ, ಅವು ಶಾಲೆಯಲ್ಲಿ ಲಭ್ಯವಿಲ್ಲವೆಂದು ತಿಳಿಸಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ.
ಈ ಹಿನ್ನೆಲೆಯಲ್ಲಿ ಬಿಇಓ ಹನುಮಂತಪ್ಪ, ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕಿ ರೇಣುಕಮ್ಮ ಹಾಗೂ ಸಿಆರ್‌ಪಿ ವೆಂಕಟೇಶ್ ವಿರುದ್ಧ ತುಮಕೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ. ನ್ಯಾಯ ದೊರಕಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.



