ರಾಯ್ಪುರ: ಛತ್ತೀಸ್‌ಗಢದಲ್ಲಿ ಮನಕಲುಕುವ ಘಟನೆ ನಡೆದಿದೆ. ಪುತ್ರನ ಅಪಘಾತ ಮರಣದ ನೋವಿನಿಂದ ಬಳಲುತ್ತಿದ್ದ ದಂಪತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಛತ್ತೀಸ್‌ಗಢ ರಾಜ್ಯದ ರಾಯ್ಪುರ ಪ್ರದೇಶದಲ್ಲಿ ಕೃಷ್ಣ ಪಟೇಲ್ (48) ಮತ್ತು ಅವರ ಪತ್ನಿ ರಮಾ ಬಾಯಿ (47) ತಮ್ಮ ಮನೆಯ ಅಂಗಳದಲ್ಲಿದ್ದ ಬೇವಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳದಲ್ಲಿ 4 ಪುಟಗಳ ಡೆತ್‌ನೋಟ್ ಹಾಗೂ ವೀಡಿಯೊ ಸಂದೇಶ ಪತ್ತೆಯಾಗಿದೆ.
ದಂಪತಿಯ ಏಕೈಕ ಪುತ್ರ ಆದಿತ್ಯ ಪಟೇಲ್ (21) 2024ರಲ್ಲಿ ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಮೇಸ್ತ್ರಿ ಕೆಲಸ ಮಾಡುತ್ತಿದ್ದ ಕೃಷ್ಣ ಮತ್ತು ಗೃಹಿಣಿ ರಮಾ ಬಾಯಿಗೆ ಪುತ್ರನೇ ಜೀವನವಾಗಿದ್ದರಿಂದ ಅವನ ಸಾವಿನ ಬಳಿಕ ಮನನೊಂದು ಬದುಕುತ್ತಿದ್ದರು.
ಆದಿತ್ಯ ದೇವಸ್ಥಾನದ ಕೆಲಸ ಮತ್ತು ಯಜ್ಞಕ್ಕೆ ಸಹಾಯ ಮಾಡಲು ಗ್ರಾಮದ ಪುರೋಹಿತರೊಂದಿಗೆ ಹೊರಗೆ ಹೋಗಿದ್ದ. ಪುತ್ರ ಮೊದಲು ಹೋಗಲು ಹಿಂಜರಿದಿದ್ದ. ಆದರೆ, ಆತನ ತಂದೆ, ‘ಇದು ದೇವರ ಕೆಲಸ.. ಹೋಗಿ ಬಾ’ ಎಂದು ಒತ್ತಾಯಿಸಿದ್ದರು. ಈ ವಿಚಾರವನ್ನು ನೆನೆದು, ನಾನು ತಪ್ಪು ಮಾಡಿದೆ ಅಂತ ತಂದೆ ಕಣ್ಣೀರಿಟ್ಟಿದ್ದಾರೆ.
ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.



