ಚಿಕ್ಕಮಗಳೂರು: ವಿಶ್ವಾಸದ ಪ್ರತೀಕವೆಂದು ಪರಿಗಣಿಸಲ್ಪಡುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲೇ ಗ್ರಾಹಕರಿಗೆ ಭಾರೀ ಮೋಸ ನಡೆದಿರುವ ಆರೋಪ ಹೊರಬಂದಿದೆ. ಗೋಲ್ಡ್ ಲೋನ್ ಹೆಸರಿನಲ್ಲಿ ಗ್ರಾಹಕರ ಅಸಲಿ ಚಿನ್ನಾಭರಣವನ್ನು ಮಾರಾಟ ಮಾಡಿ, ನಕಲಿ ಚಿನ್ನವನ್ನು ಬದಲಾಯಿಸಿದ್ದಾರೆಯೆಂಬ ಗಂಭೀರ ಆರೋಪ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ.
ಚಿಕ್ಕಮಗಳೂರು ನಗರದಲ್ಲಿರುವ ಶಾಖೆಯಲ್ಲಿ 2020 ರಿಂದ 2025ರವರೆಗೆ ಕ್ರಮಬದ್ಧವಾಗಿ ಈ ವಂಚನೆ ನಡೆದಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಸಂದೀಪ್, ನಾರಾಯಣಸ್ವಾಮಿ ಸೇರಿದಂತೆ 5 ಮಂದಿ ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಹಕರಿಗೆ ತಿಳಿಯದಂತೆ ಹೆಚ್ಚುವರಿ ಸಾಲ ಮಂಜೂರು ಮಾಡಿ ಹಣವನ್ನು ಗುಳುಂ ಮಾಡಲಾಗಿದೆ. 80 ಗ್ರಾಂ ರಿಂದ 140 ಗ್ರಾಂ ವರೆಗೆ ಚಿನ್ನ ಜಾಮೀನು ಇಟ್ಟು ಸಾಲ ಪಡೆದಿದ್ದವರು ಈಗ ತಮ್ಮ ಚಿನ್ನವನ್ನು ಮರಳಿ ಪಡೆಯಲು ಪರದಾಡುತ್ತಿದ್ದಾರೆ. ಸಾಲ ಸಂಪೂರ್ಣ ತೀರಿಸಿದ್ದರೂ ಚಿನ್ನ ವಾಪಸ್ ಸಿಗದೆ ಕಣ್ಣೀರಿಡುತ್ತಿದ್ದಾರೆ.
ಇಷ್ಟೇ ಅಲ್ಲದೆ ಕೆಲ ಗ್ರಾಹಕರ ಫಿಕ್ಸ್ಡ್ ಡಿಪಾಸಿಟ್ ಹಣವನ್ನೂ ಸಹ ಅಕ್ರಮವಾಗಿ ಬಳಕೆ ಮಾಡಿಕೊಂಡಿರುವ ಆರೋಪಗಳು ಕೇಳಿಬಂದಿವೆ. ಸ್ಥಳೀಯ ಶಾಖೆಯಲ್ಲಿ ನ್ಯಾಯ ಸಿಗದ ಕಾರಣ, ಸಂತ್ರಸ್ತರು ಬ್ಯಾಂಕಿನ ಬೆಂಗಳೂರು ಕೇಂದ್ರ ಕಚೇರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಪ್ರಕರಣ ಇದೀಗ ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸಂಪೂರ್ಣ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.



