ನವದೆಹಲಿ: ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಿರುವಲ್ಲಾದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪಶ್ಚಿಮ ಏಷ್ಯಾದ ರಾಷ್ಟ್ರಗಳ ಬಗ್ಗೆ ಕಾಂಗ್ರೆಸ್ ನೀಡುತ್ತಿರುವ ಹೇಳಿಕೆಗಳು ಭಾರತಕ್ಕೆ ಹಾನಿಕಾರಕವಾಗಿವೆ ಎಂದು ಟೀಕಿಸಿದ ಅವರು, ಇಂತಹ ಹೇಳಿಕೆಗಳಿಂದ ಗಲ್ಫ್ ದೇಶಗಳಲ್ಲಿ ಭಾರತೀಯರ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಹೇಳಿದರು.
ರಾಜಕೀಯಕ್ಕಿಂತ ದೇಶದ ಜನರ ಸುರಕ್ಷತೆಯೇ ಮುಖ್ಯ ಎಂದು ಒತ್ತಿ ಹೇಳಿದ ಮೋದಿ, ಕೇರಳದ ಜನರ ರಕ್ಷಣೆಗೆ ತಾವು ಬದ್ಧರಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದೇ ವೇಳೆ ರಾಜ್ಯದಲ್ಲಿನ ಎಲ್‌ಡಿಎಫ್ ಸರ್ಕಾರದ ವಿರುದ್ಧವೂ ಕಿಡಿಕಾರಿದ ಅವರು, ದಶಕಗಳ ದುರಾಡಳಿತಕ್ಕೆ ಈ ಚುನಾವಣೆಯಲ್ಲಿ ಅಂತ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ಕೇರಳದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದ ಪ್ರಧಾನಿ, ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಸಿಲುಕಿಕೊಂಡಿರುವ ರಾಜ್ಯದ ಜನತೆ ಈ ಬಾರಿ ಬದಲಾವಣೆಗೆ ಮತ ಹಾಕಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಅಭಿವೃದ್ಧಿ ವಿಷಯದಲ್ಲೂ ಸರ್ಕಾರಗಳನ್ನು ಟೀಕಿಸಿದ ಮೋದಿ, ರಸ್ತೆ, ಸೇತುವೆ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಈ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.



