ಡೆಲ್ಲಿ ಕ್ಯಾಪಿಟಲ್ಸ್ ತಂಡವು ರೋಚಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಮೊದಲು ಮಿಚೆಲ್ ಸ್ಟಾರ್ಕ್ ಅವರ ಮಾರಕ ಬೌಲಿಂಗ್, ಬಳಿಕ ನಾಯಕ ಅಕ್ಷರ್ ಪಟೇಲ್ ಹಾಗೂ ಅಶುತೋಷ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಡೆಲ್ಲಿ ಇನ್ನೂ 4 ಎಸೆತ ಬಾಕಿ ಇರುವಾಗಲೇ 5 ವಿಕೆಟ್ ನಷ್ಟಕ್ಕೆ 197 ರನ್ ಸಿಡಿಸಿ ಜಯ ಸಾಧಿಸಿತು.
ಕೊನೆಯ ನಾಲ್ಕು ಓವರ್‌ಗಳಲ್ಲಿ ಡೆಲ್ಲಿಗೆ 43 ರನ್ ಅಗತ್ಯವಿದ್ದಾಗ ಪಂದ್ಯ ತೀವ್ರ ಕುತೂಹಲ ಕೆರಳಿಸಿತು. 18ನೇ ಓವರ್‌ನಲ್ಲಿ 18 ರನ್ ಹಾಗೂ 19ನೇ ಓವರ್‌ನಲ್ಲಿ 12 ರನ್ ಬಂದವು. ಅಂತಿಮ ಓವರ್‌ನ ಮೊದಲ ಎರಡು ಎಸೆತಗಳಲ್ಲೇ ಅಶುತೋಷ್ ಶರ್ಮಾ ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಅಶುತೋಷ್ ಶರ್ಮಾ ಕೇವಲ 5 ಎಸೆತಗಳಲ್ಲಿ 18 ರನ್ ಸಿಡಿಸಿ ಅಜೇಯರಾಗಿದ್ದರೆ, ನಾಯಕ ಅಕ್ಷರ್ ಪಟೇಲ್ 18 ಎಸೆತಗಳಲ್ಲಿ 34 ರನ್ ಗಳಿಸಿದರು. ಇದಕ್ಕೂ ಮುನ್ನ ಅಭಿಷೇಕ್ ಪೊರೆಲ್ ಮತ್ತು ಕೆಎಲ್ ರಾಹುಲ್ ಮೊದಲ ವಿಕೆಟ್‌ಗೆ 105 ರನ್ ಜೊತೆಯಾಟ ನೀಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ಅಭಿಷೇಕ್ ಪೊರೆಲ್ 31 ಎಸೆತಗಳಲ್ಲಿ 51 ರನ್ ಹಾಗೂ ಕೆಎಲ್ ರಾಹುಲ್ 42 ಎಸೆತಗಳಲ್ಲಿ 56 ರನ್ ಗಳಿಸಿದರು.
ರಾಜಸ್ಥಾನ ಪರ ವೈಭವ್ ಸೂರ್ಯವಂಶಿ 46 ರನ್, ಧ್ರುವ್ ಜುರೇಲ್ 53 ರನ್ ಹಾಗೂ ನಾಯಕ ರಿಯಾನ್ ಪರಾಗ್ 51 ರನ್ ಸಿಡಿಸಿ ಮಿಂಚಿದರು.
ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದು ರಾಜಸ್ಥಾನದ ರನ್ ವೇಗಕ್ಕೆ ಕಡಿವಾಣ ಹಾಕಿದರು. ವಿಶೇಷವಾಗಿ 15ನೇ ಓವರ್‌ನಲ್ಲಿ ರಿಯಾನ್ ಪರಾಗ್, ಫೆರೀರಾ ಮತ್ತು ರವಿ ಸಿಂಗ್ ವಿಕೆಟ್ ಪಡೆದು ಪಂದ್ಯದ ಚಿತ್ರಣವೇ ಬದಲಿಸಿದರು. ಲುಂಗಿ ಎನ್‌ಗಿಡಿ ಮತ್ತು ಮಾಧವ್ ತಿವಾರಿ ತಲಾ ಎರಡು ವಿಕೆಟ್ ಪಡೆದರು.



