ವಿಜಯಸಾಕ್ಷಿ ಸುದ್ದಿ, ಗದಗ: “ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ನೀಡಿದೆ. ಆದರೆ ಕೇಂದ್ರ ಸರ್ಕಾರದ ಕುತಂತ್ರ ಹಾಗೂ ಚುನಾವಣಾ ಆಯೋಗದ ಸಂವಿಧಾನ ವಿರೋಧಿ ನಡೆಗಳಿಂದ ಎಸ್ಐಆರ್ ಪ್ರಕ್ರಿಯೆ ಮೂಲಕ ಜನರ ಸಂವಿಧಾನಬದ್ಧ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ” ಎಂದು ಗದಗ–ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆ ಅಧ್ಯಕ್ಷ ಮಹ್ಮದ್ ಯೂಸುಫ್ ನಮಾಜಿ ಆರೋಪಿಸಿದರು.
ನಗರದಲ್ಲಿ ಆಯೋಜಿಸಿದ್ದ ಎಸ್ಐಆರ್ ಕುರಿತು ವೇದಿಕೆ ಪದಾಧಿಕಾರಿಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಹಾರ ಹಾಗೂ ಪಶ್ಚಿಮ ಬಂಗಾಳ ಚುನಾವಣೆ ಸಂದರ್ಭದಲ್ಲಿ ಜಾರಿಗೊಂಡ ಎಸ್ಐಆರ್ ಪ್ರಕ್ರಿಯೆಯಿಂದ ಲಕ್ಷಾಂತರ ಜನರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದ ಅವರು, ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಮತದಾನದ ಹಕ್ಕು ಕಳೆದುಕೊಂಡವರಿಗೆ ಸರ್ಕಾರದ ಸೌಲಭ್ಯ ನೀಡುವುದಿಲ್ಲ ಎಂದು ಘೋಷಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ಎಸ್ಐಆರ್ ಪ್ರಕ್ರಿಯೆಯ ಹಿಂದಿನ ಉದ್ದೇಶವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಸಮುದಾಯದ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಕಾರ್ಯಕರ್ತರು ಕೈಗೊಳ್ಳಬೇಕು ಎಂದು ಕರೆ ನೀಡಿದರು.
ವೇದಿಕೆ ಕಾರ್ಯದರ್ಶಿ ಇಮ್ತಿಯಾಜ್ ಆರ್. ಮಾನ್ವಿ ಮಾತನಾಡಿ, “ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ಕೈಗೊಂಬೆಯಾಗಿ ಬಳಸಿಕೊಂಡು ವಿಶೇಷ ತೀವ್ರ ಪರಿಷ್ಕರಣೆ ನೆಪದಲ್ಲಿ ಮೂಲ ನಿವಾಸಿಗಳ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ” ಎಂದು ಆರೋಪಿಸಿದರು.
ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟು ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದಲೇ ಎಸ್ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ದೂರಿದ ಅವರು, ಎಲ್ಲರೂ ಒಗ್ಗೂಡಿ ಜನಜಾಗೃತಿ ಆಂದೋಲನ ಆರಂಭಿಸಬೇಕಾಗಿದೆ ಎಂದರು.
ವಕೀಲ ಎಂ.ಬಿ. ನದಾಫ್ ಮಾತನಾಡಿ, ಎಸ್ಐಆರ್ ಪ್ರಕ್ರಿಯೆ ಸಂವಿಧಾನ ವಿರೋಧಿಯಾಗಿದ್ದು, ಎಲ್ಲ ಸಮುದಾಯಗಳು ಒಗ್ಗೂಡಿ ವಿರೋಧಿಸಬೇಕು ಎಂದು ಹೇಳಿದರು.
ಸಮುದಾಯದ ಯುವಕರು ಬೂತ್ ಮಟ್ಟದಲ್ಲಿ ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸಿ ಜನರ ಮತದಾನದ ಹಕ್ಕು ರಕ್ಷಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ನಗರಸಭೆ ಸದಸ್ಯ ಜೂನಸಾಬ ನಮಾಜಿ ಮಾತನಾಡಿ, ಗದಗ–ಬೆಟಗೇರಿ ನಗರದ ಎಲ್ಲಾ ವಾರ್ಡ್ಗಳಲ್ಲಿ ಯುವಕರಿಗೆ ಮಾಹಿತಿ ನೀಡುವ ಜೊತೆಗೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಅಗತ್ಯ ದಾಖಲೆಗಳ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.
ಜಮಿಯತೆ ಉಲ್ಲಮಾ ಸಂಘಟನೆಯ ಮುಖಂಡ ಮೌಲಾನಾ ಶಬ್ಬೀರಹ್ಮದ್ ಬೋದ್ಲೇಖಾನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅನ್ವರ್ ಶಿರಹಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಭೆಯಲ್ಲಿ ಬಾಬಾಜಾನ ಬಳಗಾನೂರ, ಮುನ್ನಾ ಶೇಖ್, ರಫೀಕ್ ಜಮಾಲಖಾನವರ, ಸುಲೇಮಾನ ಮಾಳೆಕೊಪ್ಪ, ಇರ್ಫಾನ್ ಡಂಬಳ, ವಾಶೀಂ ಖಾಜಿ, ಅಸ್ಲಂ ಎಸ್.ಜಿ., ಉಮರ್ ಫಾರೂಖ್ ಹುಬ್ಬಳ್ಳಿ, ಎ.ಹೆಚ್. ಹೊಸಳ್ಳಿ, ಅಲ್ತಾಫ್ ಹುಬ್ಬಳ್ಳಿ, ಅಲ್ಲಾಭಕ್ಷ ದೊಡ್ಡಮನಿ, ದಾವಲಸಾಬ ಇರಕಲ್ಲ, ಇಬ್ರಾಹಿಂ ಹಳ್ಳಿಕೇರಿ, ಮಹ್ಮದಸಾಬ್ ಮುಲ್ಲಾ, ಕರೀಮಸಾಬ್ ಸುಣಗಾರ, ಆರೀಫ್ ಹುನಗುಂದ, ಸಾದಿಕ್ ನರೇಗಲ್ಲ, ಮುನ್ನಾ ಕಲ್ಮನಿ, ರಿಯಾಜ್ ಪಾಮಡಿ, ಶಬ್ಬೀರ್ ಪೀರಜಾದೆ, ಮೌಲಾಸಾಬ್ ಗಚ್ಚಿ ಸೇರಿದಂತೆ ನೂರಾರು ಪದಾಧಿಕಾರಿಗಳು ಭಾಗವಹಿಸಿದ್ದರು.
“ಮತದಾನದ ಹಕ್ಕು ಕಸಿಯುವ ಯಾವುದೇ ಪ್ರಯತ್ನವನ್ನು ಜನರು ಒಗ್ಗಟ್ಟಿನಿಂದ ಎದುರಿಸಬೇಕು.”
ಮಹ್ಮದ್ ಯೂಸುಫ್ ನಮಾಜಿ
ಗದಗ–ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆ ಅಧ್ಯಕ್ಷ



