ಗದಗ: ಸಮಾಜ ಸೇವೆ, ಜನಪರ ಆಡಳಿತ ಹಾಗೂ ಗ್ರಾಮೀಣ ಅಭಿವೃದ್ಧಿಯ ಮೂಲಕ ಜನಮನ ಗೆದ್ದಿರುವ ಗದಗ ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅಮೀರ ನಾಯಕರಿಗೆ ಬೆಂಗಳೂರಿನ ಪ್ರತಿಷ್ಠಿತ ಏಷ್ಯಾ ಇಂಟರ್ ನ್ಯಾಷನಲ್ ಕಲ್ಚರಲ್ ಅಕಾಡೆಮಿ ವತಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.
ಬೆಂಗಳೂರಿನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ಅವರಿಗೆ ಈ ಗೌರವ ನೀಡಿ ಸನ್ಮಾನಿಸಲಾಯಿತು. ಗ್ರಾಮೀಣ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಜನಪರ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅಮೀರ ನಾಯಕ, ಸರಳತೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ವಿಶಿಷ್ಟ ಗುರುತಿಸಿಕೊಂಡಿದ್ದಾರೆ.
ಅಧಿಕಾರವೆಂದರೆ ಕೇವಲ ಕಚೇರಿಯ ಗಡಿಗಳೊಳಗಿನ ವ್ಯವಸ್ಥೆಯಲ್ಲ, ಜನರ ನೋವು-ನಲಿವುಗಳಿಗೆ ಸ್ಪಂದಿಸುವ ಸೇವಾ ಧರ್ಮ ಎಂಬ ನಂಬಿಕೆಯನ್ನು ಅಮೀರ ನಾಯಕರು ತಮ್ಮ ಕಾರ್ಯಶೈಲಿಯಲ್ಲಿ ಅಳವಡಿಸಿಕೊಂಡಿದ್ದಾರೆ.
ಲಕ್ಕುಂಡಿ ಗ್ರಾಮ ಪಂಚಾಯಿತಿಯಲ್ಲಿ ಅವರ ನೇತೃತ್ವದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳು, ಸಾರ್ವಜನಿಕ ಸಮಸ್ಯೆಗಳ ತ್ವರಿತ ಪರಿಹಾರ ಹಾಗೂ ಸಮಾಜಮುಖಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಅಕಾಡೆಮಿಯ ಪದಾಧಿಕಾರಿಗಳು ಮಾತನಾಡಿ, “ಗ್ರಾಮೀಣ ಜನರ ಬದುಕಿಗೆ ಹತ್ತಿರವಾಗಿ ಕೆಲಸ ಮಾಡಿದ ಅಮೀರ ನಾಯಕರ ಸೇವಾ ಪಯಣಕ್ಕೆ ಈ ಗೌರವ ಡಾಕ್ಟರೇಟ್ ಮಹತ್ವದ ಮಾನ್ಯತೆ,” ಎಂದು ಅಭಿಪ್ರಾಯಪಟ್ಟರು.
ಆಡಳಿತ ಕ್ಷೇತ್ರದ ಜೊತೆಗೆ ಸಾಹಿತ್ಯ, ಸಾಮಾಜಿಕ ಜಾಗೃತಿ ಹಾಗೂ ಮಾನವೀಯ ಮೌಲ್ಯಗಳ ಪ್ರಚಾರದಲ್ಲಿಯೂ ಅಮೀರ ನಾಯಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬಡವರು, ಹಿಂದುಳಿದವರು ಹಾಗೂ ಸಂಕಷ್ಟದಲ್ಲಿರುವ ಜನರ ಪರ ಸದಾ ಸ್ಪಂದಿಸುವ ಅವರ ಸೇವಾ ಮನೋಭಾವ ಅನೇಕರಿಗೆ ಪ್ರೇರಣೆಯಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಗದಗ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಮಾತನಾಡಿ, “ಗ್ರಾಮೀಣ ಭಾರತದ ನಿಜವಾದ ಶಕ್ತಿ ಜನಪರ ಅಧಿಕಾರಿಗಳಲ್ಲಿದೆ. ಅಮೀರ ನಾಯಕರಿಗೆ ದೊರೆತಿರುವ ಗೌರವ ಡಾಕ್ಟರೇಟ್ ಗ್ರಾಮೀಣ ಸೇವಾ ಕ್ಷೇತ್ರಕ್ಕೇ ಸಂದ ಗೌರವ,” ಎಂದು ಹೇಳಿದರು.
ಸಮಾರಂಭದಲ್ಲಿ ಹಿರಿಯ ಸಾಹಿತಿ ಎ.ಎಸ್. ಮಕಾನದಾರ, ರಾಜ್ಯ ಸಂಘದ ಜಂಟಿ ಕಾರ್ಯದರ್ಶಿ ರಾಜು ಕಂಟಿಗೊಣ್ಣವರ, ರಾಜ್ಯ ಸಂಘದ ಕ್ರೀಡಾ ಕಾರ್ಯದರ್ಶಿ ಐ.ಎ. ಗಾಡಗೋಳಿ, ಜಿಲ್ಲಾ ಸಂಘದ ಕಾರ್ಯದರ್ಶಿ ಎಂ.ವೈ. ಮಲಕಶೆಟ್ಟಿ, ಸಮಾಜ ಸೇವಕ ಕರೀಮಸಾಬ ಸುಣಗಾರ, ಎಸ್.ಎಸ್. ಪಾರ್ವತಿಮಠ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಅಮೀರ ನಾಯಕರ ಸಾಧನೆಗೆ ಗದಗ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ಸಾಹಿತ್ಯ ವಲಯದ ಗಣ್ಯರು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.
“ಈ ಗೌರವ ನನ್ನೊಬ್ಬರದ್ದಲ್ಲ; ಗ್ರಾಮಸ್ಥರು, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಕುಟುಂಬದವರ ಬೆಂಬಲದ ಫಲ ಇದು. ಜನರ ನೋವಿಗೆ ಸ್ಪಂದಿಸುವ ಆಡಳಿತವೇ ನಿಜವಾದ ಸೇವೆ. ಈ ಸನ್ಮಾನ ಇನ್ನಷ್ಟು ಜನಪರ ಸೇವೆ ಮಾಡಲು ಹೊಸ ಪ್ರೇರಣೆ ನೀಡಿದೆ.”ಅಮೀರ ನಾಯಕ, ಪಿಡಿಒ



