ಗದಗ: ಐಪಿಎಲ್ ಕ್ರಿಕೆಟ್ ಹುಚ್ಚನ್ನು ಬಂಡವಾಳ ಮಾಡಿಕೊಂಡು ಸಾರ್ವಜನಿಕ ರಸ್ತೆಯನ್ನೇ ಬೆಟ್ಟಿಂಗ್ ಅಡ್ಡೆಯಾಗಿ ಮಾರ್ಪಡಿಸಿದ್ದ ಜೂಜಾಟ ಗ್ಯಾಂಗ್ ಮೇಲೆ ಗದಗ ಟೌನ್ ಪೊಲೀಸರು ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.
ನಗರದ ಕಲಾಮಂದಿರ ರಸ್ತೆಯ ಶ್ರೀ ತೋಂಟದಾರ್ಯ ವಾಣಿಜ್ಯ ಮಳಿಗೆ ಎದುರು ಐಪಿಎಲ್ ಟಿ-20 ಪಂದ್ಯಾವಳಿಯ ಟಾಸ್ ಹಾಗೂ ಗೆಲುವಿನ ಲೆಕ್ಕಾಚಾರ ಮೇಲೆ ಸಾರ್ವಜನಿಕರಿಂದ ಹಣ ಪಣಕ್ಕಿಟ್ಟು ಅಕ್ರಮ ಬೆಟ್ಟಿಂಗ್ ನಡೆಸಲಾಗುತ್ತಿತ್ತು. “100 ರೂ. ಹಾಕಿ 200 ರೂ. ಗೆಲ್ಲಿ” ಎಂಬ ಆಮಿಷವೊಡ್ಡಿ ಯುವಕರನ್ನು ಸೆಳೆಯಲಾಗುತ್ತಿತ್ತು ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಬಂಧಿತ ಆರೋಪಿಯನ್ನು ಪ್ರಶಾಂತಗೌಡ ಬಾಪುಗೌಡ ಪಾಟೀಲ್ ಎಂದು ಗುರುತಿಸಲಾಗಿದ್ದು, ಅಮಿತ್ ಪರಶುರಾಮ ಪೂಜಾರ್ ಎಂಬಾತ ಪರಾರಿಯಾಗಿದ್ದಾನೆ. ಆರೋಪಿಗಳು ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯವನ್ನು ನೆಪ ಮಾಡಿಕೊಂಡು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಜೂಜಾಟ ಆಡಿಸುತ್ತಿದ್ದರು ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗದಗ ಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ಆರ್.ಆರ್. ಮುಂಡೇವಾಡಗಿ ನೇತೃತ್ವದ ತಂಡ, ಸ್ಥಳದಿಂದ ಬೆಟ್ಟಿಂಗ್ ಚೀಟಿ, ಬಾಲ್ ಪೆನ್ ಹಾಗೂ 500 ರೂ. ನಗದು ವಶಪಡಿಸಿಕೊಂಡಿದೆ.
ಈ ಕುರಿತು ಗದಗ ಟೌನ್ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 82/2026 ಅಡಿಯಲ್ಲಿ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ 2021ರ ಕಲಂ 78(1)(a)(vi) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 112 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.



