ಗದಗ: ಬಡವರಿಗಾಗಿ ಸರ್ಕಾರ ವಿತರಿಸುವ ಅನ್ನಭಾಗ್ಯ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲದ ವಿರುದ್ಧ ಗದಗ ಜಿಲ್ಲೆಯ ರೋಣ ಹಾಗೂ ಮುಂಡರಗಿ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.
ಪ್ರತ್ಯೇಕ ದಾಳಿಗಳಲ್ಲಿ ಸಾವಿರಾರು ರೂಪಾಯಿ ಮೌಲ್ಯದ ಪಿಡಿಎಸ್ ಅಕ್ಕಿ, ಸಾಗಾಟಕ್ಕೆ ಬಳಸಲಾಗಿದ್ದ ವಾಹನಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ಹಾಗೂ ಪಿಡಿಎಸ್ ನಿಯಂತ್ರಣ ಆದೇಶಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ರೋಣ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಹಟ್ಟಿ ಗ್ರಾಮದ ಹೊಳೆಆಲೂರು ರಸ್ತೆಯಲ್ಲಿರುವ ಶೆಡ್ ಮೇಲೆ ಮೇ 21ರಂದು ಮಧ್ಯಾಹ್ನ ದಾಳಿ ನಡೆಸಿದ ಅಧಿಕಾರಿಗಳು, ಇಮ್ತಿಯಾಜ್ ಜಲಾವರ್ ಎಂಬಾತ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿರುವುದನ್ನು ಪತ್ತೆ ಹಚ್ಚಿದರು. ದಾಳಿಯ ವೇಳೆ ಸುಮಾರು ₹22,500 ಮೌಲ್ಯದ 25 ಚೀಲ ಪಿಡಿಎಸ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಆಹಾರ ನಿರೀಕ್ಷಕಿ ಸುವರ್ಣ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ರೋಣ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.87/2026 ದಾಖಲಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮುಂಡರಗಿ ಪಟ್ಟಣದಲ್ಲಿ ಸಾರ್ವಜನಿಕರು ನೀಡಿದ ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಪಡಿತರ ಅಕ್ಕಿ ಸಂಗ್ರಹ ಜಾಲವನ್ನು ಬಯಲಿಗೆಳೆದಿದ್ದಾರೆ. ಬಸವರಾಜ ಭಜಂತ್ರಿ ಎಂಬಾತ ಪಿಡಿಎಸ್ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು ₹30,800 ಮೌಲ್ಯದ 28 ಚೀಲ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಅಕ್ಕಿ ಸಾಗಾಟಕ್ಕೆ ಬಳಸಲಾಗಿದ್ದ ವಾಹನಗಳನ್ನೂ ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.98/2026 ದಾಖಲಾಗಿದೆ.
ರೋಣ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ಜಂಬುಲಿಂಗೇಶ್ವರ ದೇವಸ್ಥಾನದ ಸಮೀಪ ಮೇ 28ರಂದು ಸಂಜೆ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಉಮೇಶ್ ಭೀಮಪ್ಪ ಗಣಿ (32) ಎಂಬಾತನನ್ನು ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ಬಳಿಯಲ್ಲಿ 30 ಚೀಲಗಳಲ್ಲಿ ತಲಾ 45 ಕೆ.ಜಿ. ತೂಕದ ಒಟ್ಟು 13 ಕ್ವಿಂಟಲ್ 50 ಕೆ.ಜಿ. ಪಿಡಿಎಸ್ ಅಕ್ಕಿ ಪತ್ತೆಯಾಗಿದ್ದು, ವಶಪಡಿಸಿಕೊಂಡ ಅಕ್ಕಿಯ ಮೌಲ್ಯ ₹30,375 ಎಂದು ಅಂದಾಜಿಸಲಾಗಿದೆ.
ಸಾರ್ವಜನಿಕರಿಗೆ ವಿತರಿಸಬೇಕಾದ ಅಗತ್ಯ ಆಹಾರ ಧಾನ್ಯವನ್ನು ಯಾವುದೇ ಪರವಾನಗಿ ಇಲ್ಲದೆ ಖಾಸಗಿ ಲಾಭಕ್ಕಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮಾಹಿತಿ ಆಧರಿಸಿ ಆಹಾರ ನಿರೀಕ್ಷಕಿ ಸುವರ್ಣಾ ಮುಕ್ಕಣ್ಣ ಜಮ್ಮನಕಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಅನ್ನಭಾಗ್ಯ ಹಾಗೂ ಪಿಡಿಎಸ್ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಗೆ ತಳ್ಳುವವರ ವಿರುದ್ಧ ಮುಂದಿನ ದಿನಗಳಲ್ಲೂ ಕಠಿಣ ಕ್ರಮ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ, ಸಂಗ್ರಹ ಹಾಗೂ ಮಾರಾಟದ ವಿರುದ್ಧ ವಿಶೇಷ ನಿಗಾ ಇಡಲಾಗಿದ್ದು, ದಂಧೆಕೋರರ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.



