ಶಿವಮೊಗ್ಗ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಕುರಿತು ನೀಡುತ್ತಿರುವ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ನಗರದ ವಿನೋಬನಗರದ ಕಲ್ಲಹಳ್ಳಿಯ ಅಭಿಷ್ಟವರ ಗಣಪತಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಕೋರಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಆರ್ಎಸ್ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಮತ್ತು ಗೌರವವನ್ನು ಪ್ರಿಯಾಂಕ್ ಖರ್ಗೆ ಅವರು ಉಳಿಸಿಕೊಂಡಿಲ್ಲ. ಅವರು ಪದೇ ಪದೇ ಇದೇ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಅವರ ತಂದೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದು, ಈಗ ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ. ಅವರ ವಿಚಾರ ಅವರಿಗೆ, ನಮ್ಮ ವಿಚಾರ ನಮಗೆ. ಆರ್ಎಸ್ಎಸ್ ಅನ್ನು ದೇಶದ ಜನತೆ ಒಪ್ಪಿಕೊಂಡಿದ್ದಾರೆ. ಅದರ ಕಾರ್ಯವೈಖರಿಯನ್ನು ಜಗತ್ತೇ ಗುರುತಿಸಿದೆ. ಅದರ ಪರಿಣಾಮವೇ ಇಂದು ದೇಶದ ಅಭಿವೃದ್ಧಿ ಮತ್ತು ಆಡಳಿತದಲ್ಲಿ ಕಾಣಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಆರೋಪಿಸಿದ ರಾಘವೇಂದ್ರ, “ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮತ್ತು ಪಕ್ಷದ ಹೈಕಮಾಂಡ್ನ್ನು ಮೆಚ್ಚಿಸಲು ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದ್ದರಿಂದ ಅವರ ಆರೋಪಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವೇ ಇಲ್ಲ” ಎಂದು ಹೇಳಿದರು.



