ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಯಾವುದೇ ಸಂಘ-ಸಂಸ್ಥೆಗಳು ಕೇವಲ ಸದಸ್ಯರ ಹಿತಕ್ಕಷ್ಟೇ ಸೀಮಿತವಾಗದೆ ರೈತರ ಹಾಗೂ ಸಮಾಜದ ಹಿತವನ್ನು ಕಾಪಾಡುವ ದಿಸೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಆಹಾರ ಧಾನ್ಯ ವರ್ತಕರ ಸಂಘದ ನೂತನ ಅಧ್ಯಕ್ಷ ಅಂಬಾಡಿ ಮಹೇಶ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ಆಹಾರ ಧಾನ್ಯ ವರ್ತಕರ ಸಂಘದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಘಟನೆಗಳು ಸದುದ್ದೇಶ ಮತ್ತು ಒಗ್ಗಟ್ಟಿನ ಮೂಲಮಂತ್ರದೊಂದಿಗೆ ಕೆಲಸ ಮಾಡಿದಾಗ ಮಾತ್ರ ಯಾವುದೇ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದರು.
ವ್ಯಾಪಾರದಲ್ಲಿ ಎದುರಾಗುವ ಸಮಸ್ಯೆಗಳನ್ನು ಜಾಣ್ಮೆಯಿಂದ ನಿಭಾಯಿಸುವ ಸಾಮರ್ಥ್ಯ ಪ್ರತಿಯೊಬ್ಬ ವರ್ತಕರಲ್ಲಿರಬೇಕು. ಪಟ್ಟಣದಲ್ಲಿ ಬಲಿಷ್ಠ ಚೇಂಬರ್ ಆಫ್ ಕಾಮರ್ಸ್ ಇದ್ದು, ಅದು ಎಲ್ಲಾ ವ್ಯಾಪಾರಿಗಳ ಹಿತವನ್ನು ಕಾಪಾಡಲು ಸದಾ ಸಿದ್ಧವಾಗಿದೆ. ಹಿರಿಯ ವರ್ತಕರ ಅನುಭವ ಮತ್ತು ಮಾರ್ಗದರ್ಶನದಿಂದ ಸಂಘ ಇನ್ನಷ್ಟು ಯಶಸ್ಸಿನ ಹಾದಿಯಲ್ಲಿ ಸಾಗಲಿದೆ ಎಂದು ತಿಳಿಸಿದರು.
ಚೇಂಬರ್ ಆಫ್ ಕಾಮರ್ಸ್‌ನ ಹಿರಿಯ ವರ್ತಕರಾದ ಅಕ್ಕಿ ಶಿವಣ್ಣ ಮಾತನಾಡಿ, ಪಟ್ಟಣದ ಇತರೆ ಸಂಘಗಳಿಗಿಂತ ಆಹಾರ ಧಾನ್ಯ ವರ್ತಕರ ಸಂಘ ಹೆಚ್ಚು ಒಗ್ಗಟ್ಟನ್ನು ಹೊಂದಿದ್ದು, ಹಿರಿಯ ವರ್ತಕರ ಪರಿಶ್ರಮದಿಂದಲೇ ಈ ಹಂತಕ್ಕೆ ಬೆಳೆದಿದೆ ಎಂದು ಹೇಳಿದರು.
ನಿಕಟ ಪೂರ್ವ ಉಪಾಧ್ಯಕ್ಷ ಬಸವರಾಜ್ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಶ್ರಮ, ಶಿಸ್ತು ಮತ್ತು ಗುರಿ ಮುಖ್ಯ. ಉದಯಿಸುವ ಸೂರ್ಯ, ಓಡುವ ಸಪ್ತ ಕುದುರೆಗಳು, ದುಡಿಯುವ ಕತ್ತೆ ಹಾಗೂ ನರಿಗಳ ಚಿತ್ರಗಳು ಜೀವನದ ಪಾಠಗಳನ್ನು ಸಾರುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವರ್ತಕರನ್ನು ನೂತನ ಅಧ್ಯಕ್ಷ ಅಂಬಾಡಿ ಮಹೇಶ್ ಹಾಗೂ ನಿಕಟ ಪೂರ್ವ ಅಧ್ಯಕ್ಷ ಶ್ರೀಧರ ಶೆಟ್ರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷ ಒಂಟಿಗೋಡಿ ಕಲ್ಲೇಶ್, ಖಜಾಂಚಿ ಚಿಂತರಪಳ್ಳಿ ಪ್ರಕಾಶ್, ಬಂಡಿಹಳ್ಳಿ ರಾಮಣ್ಣ, ಗಂಗಾವತಿ ಸುದರ್ಶನ್, ಎಪಿಎಂಸಿ ಕಾರ್ಯದರ್ಶಿ ಎನ್. ಶೈಲಜಾ, ಬಾದಾಮಿ ರಾಜಣ್ಣ, ಬಾದಾಮಿ ಪ್ರಭು, ಉಲವತ್ತಿ ಬಸಣ್ಣ, ಪೋತಗುಳಿ ನಾಗರಾಜ, ಕೆ. ದೇವೇಂದ್ರ ಸೇರಿದಂತೆ ಅನೇಕ ವರ್ತಕರು ಹಾಗೂ ರೈತರು ಭಾಗವಹಿಸಿದ್ದರು.
ಶಾರದಾ ಮಂಜುನಾಥ್ ಪ್ರಾರ್ಥಿಸಿದರು. ದೇವರೆಡ್ಡಿ ಸ್ವಾಗತ ಹಾಗೂ ನಿರೂಪಣೆ ನೆರವೇರಿಸಿದರು.
“ವ್ಯಾಪಾರ ದ್ರೋಹದ ಚಿಂತನೆ ಆಗದೆ, ದ್ರವ್ಯ ಸೃಷ್ಟಿಯ ಚಿಂತನೆ ಆಗಬೇಕು”
ಅಂಬಾಡಿ ಮಹೇಶ್



