HomeKarnataka Newsಮುಂಗಾರು ಅಬ್ಬರಕ್ಕೆ ವಾಟರ್ ಸ್ಪೋರ್ಟ್ಸ್ ಸಂಪೂರ್ಣ ಬಂದ್: ಮಂಗಳೂರು ಬೀಚ್ʼಗಳಲ್ಲಿ ಹೈಅಲರ್ಟ್

ಮುಂಗಾರು ಅಬ್ಬರಕ್ಕೆ ವಾಟರ್ ಸ್ಪೋರ್ಟ್ಸ್ ಸಂಪೂರ್ಣ ಬಂದ್: ಮಂಗಳೂರು ಬೀಚ್ʼಗಳಲ್ಲಿ ಹೈಅಲರ್ಟ್

For Dai;y Updates Join Our whatsapp Group

Spread the love

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಗಳಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿವೆ.

ಜಿಲ್ಲೆಯ ಎಲ್ಲಾ ಪ್ರಮುಖ ಬೀಚ್‌ಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಸಮುದ್ರ ಆಧಾರಿತ ಮನರಂಜನಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಂಗಳೂರಿನ ಜನಪ್ರಿಯ ಪ್ರವಾಸಿ ತಾಣಗಳಾದ ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ ಸೇರಿದಂತೆ ಜಿಲ್ಲೆಯ ಎಲ್ಲ ಕಡಲತೀರಗಳಲ್ಲಿ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳಿಗೆ ತಕ್ಷಣದಿಂದಲೇ ನಿರ್ಬಂಧ ಹೇರಲಾಗಿದೆ.

ಮುಂಗಾರು ಅವಧಿ ಮುಗಿಯುವವರೆಗೆ ಈ ನಿರ್ಬಂಧ ಮುಂದುವರಿಯಲಿದ್ದು, ಪ್ರವಾಸಿಗರ ನೆಚ್ಚಿನ ತೇಲುವ ಸೇತುವೆ, ಬೋಟಿಂಗ್, ಜೆಟ್ ಸ್ಕೀ, ಪ್ಯಾರಾಸೈಲಿಂಗ್ ಸೇರಿದಂತೆ ವಿವಿಧ ಸಾಹಸ ಕ್ರೀಡೆಗಳಿಗೂ ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮುದ್ರದಲ್ಲಿ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಡಲತೀರದ ಹಲವು ಭಾಗಗಳಲ್ಲಿ ಸುರಕ್ಷತಾ ಹಗ್ಗಗಳನ್ನು ಅಳವಡಿಸಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದ್ದು, ಪ್ರವಾಸಿಗರು ಸಮುದ್ರದ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ನಿಯಮ ಉಲ್ಲಂಘಿಸಿ ಸಮುದ್ರಕ್ಕಿಳಿಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಅಲ್ಲದೆ, ಬೀಚ್ ಪ್ರದೇಶಗಳಲ್ಲಿ ಲೈಫ್‌ಗಾರ್ಡ್ ಸಿಬ್ಬಂದಿ, ಕರಾವಳಿ ಕಾವಲುಪಡೆ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 24 ಗಂಟೆಗಳ ಕಾಲ ನಿಗಾವಹಿಸಲಾಗಿದೆ.

ಬೀಚ್ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿಲ್ಲ. ಆದರೆ ಪ್ರವಾಸಿಗರು ಕಡಲಿಗೆ ಇಳಿಯದೆ ಸುರಕ್ಷಿತ ಪ್ರದೇಶಗಳಲ್ಲಿ ಉಳಿದುಕೊಂಡು ಮಾತ್ರ ಸಮುದ್ರದ ದೃಶ್ಯಾವಳಿಯನ್ನು ವೀಕ್ಷಿಸಬಹುದು. ಕರಾವಳಿ ಪ್ರದೇಶಗಳಿಗೆ ಭೇಟಿ ನೀಡುವ ಸಾರ್ವಜನಿಕರು ಹಾಗೂ ಪ್ರವಾಸಿಗರು ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!