ಬೆಂಗಳೂರು: ವೈಟ್‌ಫೀಲ್ಡ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಳೆ ಕಾರಣದಿಂದ ಹದಗೆಟ್ಟ ರಸ್ತೆಯ ಗುಂಡಿಗೆ ಸ್ಕಿಡ್ ಆಗಿ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಮಾರತ್ತಹಳ್ಳಿಯಿಂದ ಸಿದ್ದಾಪುರ ಕಡೆಗೆ ತಾಯಿ ಕಾಂತಾ ಮತ್ತು ಮಗಳು ನೇಹಾ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ವಾಹನ ನಿಯಂತ್ರಣ ತಪ್ಪಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ರಸ್ತೆ ಮೇಲಿನ ಗುಂಡಿಗೆ ಸ್ಕಿಡ್ ಆಗಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಕೆಳಗೆ ಬಿದ್ದ ತಾಯಿ ಕಾಂತಾ ಅವರ ಮೇಲೆ ಹಿಂದಿನಿಂದ ಬಂದ ಶಾಲಾ ಬಸ್ ಹರಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಮಗಳು ನೇಹಾ ಸಣ್ಣ ಮಟ್ಟದ ಅಪಾಯದಿಂದ ಪಾರಾಗಿದ್ದಾಳೆ. ಘಟನೆ ಸಂಬಂಧ ವೈಟ್‌ಫೀಲ್ಡ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.



