ಗದಗ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆರೋಪದ ಬಗ್ಗೆ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಸ್ಪಷ್ಟನೆ ನೀಡಿದ್ದು, ಆರೋಪಗಳನ್ನು ಸಂಪೂರ್ಣ ತಳ್ಳಿಹಾಕಿದ್ದಾರೆ.
ತಮ್ಮ ವಿರುದ್ಧ ಹರಡುತ್ತಿರುವ ಸುದ್ದಿ ಸುಳ್ಳು ಎಂದು ಹೇಳಿದ ಅವರು, ಪಕ್ಷದಿಂದ ಜಾರಿ ಮಾಡಲಾದ ವಿಪ್ ಪ್ರಕಾರವೇ ಎನ್‌ಡಿಎ ಅಭ್ಯರ್ಥಿಗಳಿಗೆ ಮತ ಚಲಾಯಿಸಲಾಗಿದೆ ಎಂದು ತಿಳಿಸಿದ್ದಾರೆ. ಬಿಜೆಪಿಯಿಂದ ಒಟ್ಟು 60 ಶಾಸಕರಿಗೆ ಮತದಾನ ಸೂಚನೆ ನೀಡಲಾಗಿತ್ತು ಎಂದು ಅವರು ಹೇಳಿದರು.
ಪಕ್ಷದ ಆದೇಶವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಯಾವುದೇ ಅಡ್ಡ ಮತದಾನ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ತಮ್ಮ ಹೆಸರುಗಳನ್ನು ಅನಗತ್ಯವಾಗಿ ವಿವಾದಕ್ಕೆ ಎಳೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಯಾವುದೇ ದಾಖಲೆ ಇಲ್ಲದೆ ಆರೋಪ ಮಾಡುವುದು ತಪ್ಪು ಎಂದು ಹೇಳಿದರು.
ಸಿ.ಟಿ. ರವಿ ನೇತೃತ್ವದಲ್ಲಿ ರಚಿಸಲಾದ ಸತ್ಯಶೋಧನಾ ಸಮಿತಿಯ ತನಿಖೆಗೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.



