ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪಟ್ಟಣದ ಭಾವೈಕ್ಯತೆಯ ಪ್ರತೀಕಗಳಾದ ಶ್ರೀ ಜ. ಫಕೀರೇಶ್ವರ ಮಠ ಹಾಗೂ ಹಜರತ್ ಮೆಹಬೂಬ ಸುಬಾನಿ ದರ್ಗಾ ಮಧ್ಯದ ಹಳ್ಳದ ದಂಡೆಯ ಬಳಿ ಸಾರ್ವಜನಿಕ ಶೌಚಾಲಯ ಮತ್ತು ಸ್ನಾನಗೃಹ ನಿರ್ಮಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಕಾರ್ಯಾಧ್ಯಕ್ಷ ದೇವೇಂದ್ರ ಶಿಂಧೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ವಡವಿ, ಈ ಎರಡೂ ಧಾರ್ಮಿಕ ಕೇಂದ್ರಗಳಿಗೆ ಪ್ರತಿದಿನ ನೂರಾರು ಹಾಗೂ ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಅಗತ್ಯ ಮೂಲಸೌಲಭ್ಯಗಳ ಕೊರತೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಶೌಚಾಲಯ, ಸ್ನಾನಗೃಹ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಶುಚಿತ್ವ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಇಮ್ರಾನ ಬಾವಿಕಟ್ಟಿ, ಮಲಿಕ ನಗಾರಿ, ತೌಸಿಫ ವಡ್ಡಟ್ಟಿ, ಅನ್ವರ್ ಬರದ್ವಾಡ, ಮೋದಿನ ಪರೀಟ, ಆಸಿಫ್ ಪಠಾಣ, ಮಂಜು ಭಜಂತ್ರಿ, ದೀಪಾ ಹರಿಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



