ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಸ್ತೆಗಳು ಒಂದು ಪ್ರದೇಶದ ಅಭಿವೃದ್ಧಿ ಹಾಗೂ ನಾಗರಿಕತೆಯ ಮಾನದಂಡಗಳಾಗಿದ್ದು, ಉತ್ತಮ ರಸ್ತೆಗಳ ನಿರ್ಮಾಣದಿಂದ ಅಪಘಾತಗಳು ಕಡಿಮೆಯಾಗಿ ಜನರ ಅಮೂಲ್ಯ ಜೀವಗಳು ರಕ್ಷಣೆ ಪಡೆಯುತ್ತವೆ ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ ಹೇಳಿದರು.
ಪಟ್ಟಣದ ಶ್ರೀ ಪಾಂಡುರಂಗ ದೇವಸ್ಥಾನದಿಂದ ಕೆಚ್ಚಿನಮಂಡೆ ರಸ್ತೆವರೆಗೆ ಸುಮಾರು 3 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ರಸ್ತೆ ಅಭಿವೃದ್ಧಿ ವಿಶೇಷ ಅನುದಾನದಡಿ 1 ಕೋಟಿ 65 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು. ಗುತ್ತಿಗೆದಾರರು ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ರಸ್ತೆ ನಿರ್ಮಿಸಬೇಕು ಎಂದು ಸೂಚಿಸಿದರು.
ಈ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಮುಂದಿನ ಹಂತದಲ್ಲಿ ವಿವಿಧ ಅನುದಾನಗಳನ್ನು ತಂದು ಮಾಗಿ-ಮಾವಿನಹಳ್ಳಿವರೆಗೆ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದಲ್ಲಿದ್ದು ಪಕ್ಷಕ್ಕೆ ದ್ರೋಹ ಮಾಡುವವರು ಮಾತೃದ್ರೋಹ ಮಾಡಿದಂತೆ. ತಾನು ಯಾವುದೇ ಸಂದರ್ಭದಲ್ಲೂ ಪಕ್ಷದ್ರೋಹ ಮಾಡುವವನಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಾದಾಮಿ ಮೃತ್ಯುಂಜಯ, ತಾಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಸಿದ್ಧರಾಜು, ನಾಣ್ಯಪುರ ಕೃಷ್ಣಮೂರ್ತಿ, ಚಿತ್ತವಾಡಗಿ ಪ್ರಕಾಶ್, ಗುತ್ತಿಗೆದಾರ ದೊಡ್ಡಬಸಪ್ಪ, ಶ್ರೀಕಾಂತ್ ಸೇರಿದಂತೆ ಕುರದಗಡ್ಡಿ ಗ್ರಾಮ ಹಾಗೂ ರೈತರ ಓಣಿಯ ನಿವಾಸಿಗಳು ಉಪಸ್ಥಿತರಿದ್ದರು.
“ರಸ್ತೆಗಳು ಅಭಿವೃದ್ಧಿಯ ಕನ್ನಡಿಯಾಗಿವೆ. ಗುಣಮಟ್ಟದ ರಸ್ತೆ ನಿರ್ಮಾಣದಿಂದ ಅಪಘಾತಗಳು ಕಡಿಮೆಯಾಗಿ ಜನರ ಜೀವ ರಕ್ಷಣೆ ಸಾಧ್ಯವಾಗುತ್ತದೆ.”
– ಕೆ. ನೇಮಿರಾಜ್ ನಾಯ್ಕ, ಶಾಸಕ



