ಮೈಸೂರು: ಬಿಲ್ ಪಾವತಿ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಪಬ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಕಸಿದುಕೊಳ್ಳುವ ಮಟ್ಟಕ್ಕೆ ತಿರುಗಿದ ಘಟನೆ ಮೈಸೂರಿನ ಅಗ್ರಹಾರದಲ್ಲಿರುವ ಸಿಪಾಯಿ ಗ್ರಾಂಡೆ ಪಬ್‌ನಲ್ಲಿ ನಡೆದಿದೆ.
ಜನ್ಮದಿನದ ಸಂಭ್ರಮಕ್ಕಾಗಿ ಪಬ್‌ಗೆ ಬಂದಿದ್ದ ಯುವಕರ ತಂಡ, ಬಿಲ್ ವಿಚಾರದಲ್ಲಿ ಮ್ಯಾನೇಜರ್ ಜತೆ ವಾಗ್ವಾದ ನಡೆಸಿದೆ. ಗಲಾಟೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಜರಾಬಾದ್ ಮೂಲದ ಏಳು ಮಂದಿ ಯುವಕರ ತಂಡ ಪಾರ್ಟಿ ಮಾಡಿದ್ದು, ಸುಮಾರು 15 ಸಾವಿರ ರೂಪಾಯಿ ಬಿಲ್ ಆಗಿತ್ತು. ಬಿಲ್ ಪಾವತಿಸಲು ಕೇಳಿದ ವೇಳೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ.
ಕಾರ್ಡ್ ಮೂಲಕ ಹಣ ಪಾವತಿಸುತ್ತೇವೆ ಎಂದು ನೆಪ ಹೇಳಿ ಪಬ್ ಮ್ಯಾನೇಜರ್ ವಿನಯ್ ಅವರನ್ನು ಹೊರಗೆ ಕರೆಸಿಕೊಂಡ ಆರೋಪಿಗಳು, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ವಿನಯ್ ಅವರ ಕುತ್ತಿಗೆಯಲ್ಲಿದ್ದ 23 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



