ಬೆಂಗಳೂರು: ಜ್ಯೋತಿಷಿ ಆರ್ಯವರ್ಧನ್ ಗುರೂಜಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಅವರ ವಿರುದ್ಧ ಬೆಂಗಳೂರಿನ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂದರ್ಶನವೊಂದರಲ್ಲಿ ಲಕ್ಷ್ಮೀ ದೇವಿ ಕುರಿತು ಆರ್ಯವರ್ಧನ್ ಗುರೂಜಿ ನೀಡಿದ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹೇಳಿಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದು, ಮಹಿಳೆಯರ ಗೌರವಕ್ಕೂ ಅವಮಾನವಾಗಿದೆ ಎಂದು ಆರೋಪಿಸಿ ಕರ್ನಾಟಕ ಗೋವು ರಕ್ಷಕರ ಸೇನೆ ದೂರು ಸಲ್ಲಿಸಿದೆ.
ದೂರಿನ ಪ್ರಕಾರ, ಆರ್ಯವರ್ಧನ್ ಗುರೂಜಿ ಮಾನವ ದೇಹದ ಒಂದು ಅಂಗವನ್ನು ಉಲ್ಲೇಖಿಸಿ ವಿವಾದಾತ್ಮಕವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕರ್ನಾಟಕ ಗೋವು ರಕ್ಷಕರ ಸೇನೆ ಪರ ಸುಮನ್ ಅವರು ಶಂಕರಪುರಂ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿ, ಆರ್ಯವರ್ಧನ್ ಗುರೂಜಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು ಪ್ರಾಥಮಿಕ ಪರಿಶೀಲನೆ ಆರಂಭಿಸಿದ್ದು, ಆರ್ಯವರ್ಧನ್ ಗುರೂಜಿಗೆ ವಿಚಾರಣೆಗೆ ಹಾಜರಾಗುವಂತೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ಈ ವಿವಾದಕ್ಕೆ ಸಂಬಂಧಿಸಿದಂತೆ ಆರ್ಯವರ್ಧನ್ ಗುರೂಜಿ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ ಎನ್ನಲಾಗಿದೆ.



