ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ (ಇವಿ) ಬಸ್‌ಗಳಿಗೆ ಸಂಬಂಧಿಸಿದ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೊಸ ಇವಿ ಬಸ್‌ಗಳ ಖರೀದಿ ಕುರಿತು ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಎಚ್ಚರಿಕೆಯ ನಿಲುವು ತಾಳಿದೆ.
ಇವಿ ಬಸ್‌ಗಳ ಕಾರ್ಯಕ್ಷಮತೆ ಹಾಗೂ ಅಪಘಾತಗಳ ಕಾರಣಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಸಾರಿಗೆ ಇಲಾಖೆ ಮುಂದಾಗಿದ್ದು, ಸಾರಿಗೆ ಸಚಿವರ ಸೂಚನೆಯ ಮೇರೆಗೆ ಈ ಸಂಬಂಧ ಇಲಾಖೆಯ ಕಾರ್ಯದರ್ಶಿಗೆ ಅಗತ್ಯ ನಿರ್ದೇಶನ ನೀಡಲಾಗಿದೆ.
ಈ ಹಿಂದೆ ಸಾರಿಗೆ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿ ಅವರು ಇವಿ ಬಸ್‌ಗಳಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳು ಹಾಗೂ ಅಪಘಾತಗಳ ಬಗ್ಗೆ ದಾಖಲೆಗಳೊಂದಿಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು. ಆದರೆ, ಈವರೆಗೆ ಯಾವುದೇ ಸ್ಪಷ್ಟ ಪರಿಹಾರ ಕಂಡುಬಂದಿಲ್ಲ ಎನ್ನಲಾಗಿದೆ.
ಇತ್ತೀಚಿನ ಅಪಘಾತಗಳ ಹಿನ್ನೆಲೆಯಲ್ಲಿ ಅಧ್ಯಯನ ವರದಿ ಸಲ್ಲಿಕೆಯಾದ ಬಳಿಕವೇ ಹೊಸ ಇವಿ ಬಸ್‌ಗಳ ಖರೀದಿ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ವರ್ಷ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸುಮಾರು 1,500 ಹೊಸ ಇವಿ ಬಸ್‌ಗಳು ಸೇರ್ಪಡೆಯಾಗಬೇಕಾಗಿತ್ತು. ಆದರೆ ಸರ್ಕಾರ ವರದಿ ಕೇಳಿರುವ ಹಿನ್ನೆಲೆಯಲ್ಲಿ ಹೊಸ ಇವಿ ಬಸ್ ಖರೀದಿ ಪ್ರಕ್ರಿಯೆಗೆ ಸದ್ಯ ತಾತ್ಕಾಲಿಕ ಬ್ರೇಕ್ ಬಿದ್ದಿದೆ.



