ಬೆಂಗಳೂರು: ಮಹಿಳೆಯೊಬ್ಬರ ಮುಖಕ್ಕೆ ಸಾಕು ನಾಯಿ ಕಚ್ಚಿದ ಪ್ರಕರಣದಲ್ಲಿ ನಾಯಿ ಮಾಲೀಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ನಾಯಿಯನ್ನು ಕಟ್ಟಿಹಾಕದೆ ಬಿಟ್ಟು, ಅದರ ದಾಳಿಯಿಂದ ಇತರರಿಗೆ ಗಾಯವಾದರೆ ಅದಕ್ಕೆ ನಾಯಿ ಮಾಲೀಕರೇ ಹೊಣೆಗಾರರು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇಂದಿರಾನಗರ ನಿವಾಸಿ ಲಲಿತಾ ಗೋಪಾಲಕೃಷ್ಣನ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿತು.
ಅರ್ಜಿದಾರರ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ನಾಯಿಯನ್ನು ನಿಯಂತ್ರಣವಿಲ್ಲದೆ ಬಿಡುವುದು ಬೇಜವಾಬ್ದಾರಿಯ ವರ್ತನೆ ಎಂದು ಅಭಿಪ್ರಾಯಪಟ್ಟಿದೆ. ಸಾಕು ಪ್ರಾಣಿಗಳ ಮಾಲೀಕರು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಜವಾಬ್ದಾರಿಯಿಂದ ವರ್ತಿಸಬೇಕು. ಈ ಪ್ರಕರಣ ಇತರ ನಾಯಿ ಮಾಲೀಕರಿಗೂ ಎಚ್ಚರಿಕೆಯ ಪಾಠವಾಗಬೇಕು. ಇಂತಹ ಪ್ರಕರಣಗಳಲ್ಲಿ ಕ್ರಿಮಿನಲ್ ಕ್ರಮವನ್ನು ಈ ಹಂತದಲ್ಲೇ ರದ್ದುಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಕೆಯಾಗಿರುವುದರಿಂದ, ಅರ್ಜಿದಾರರು ವಿಚಾರಣಾ ನ್ಯಾಯಾಲಯದಲ್ಲಿ ಆರೋಪಮುಕ್ತಗೊಳಿಸುವಂತೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪೀಠ ಸೂಚಿಸಿತು. ಬಳಿಕ ಅರ್ಜಿದಾರರ ಪರ ವಕೀಲರು ಹೈಕೋರ್ಟ್‌ನಲ್ಲಿದ್ದ ಅರ್ಜಿಯನ್ನು ಹಿಂಪಡೆದುಕೊಂಡರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮಹಜರು ಹಾಗೂ ವೈದ್ಯಕೀಯ ವರದಿಯಲ್ಲಿ ಗಂಭೀರ ಗಾಯಗಳ ಬಗ್ಗೆ ಯಾವುದೇ ದಾಖಲೆಯಿಲ್ಲ. ದೂರುದಾರರಿಗೆ ನಾಯಿ ಈಗಾಗಲೇ ಪರಿಚಿತವಾಗಿದ್ದು, ಅವರೇ ನಾಯಿಯ ಬಳಿ ಮುಖ ತಂದಿದ್ದರು. ಅಲ್ಲದೆ, ಇದು ಅಪಾಯಕಾರಿ ತಳಿಯ ನಾಯಿಯಲ್ಲ. ಹಣ ಪಡೆಯುವ ಉದ್ದೇಶದಿಂದಲೇ ಸುಳ್ಳು ದೂರು ದಾಖಲಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಪ್ರಕರಣದ ಹಿನ್ನೆಲೆ
ನಾಯಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಲಲಿತಾ ಗೋಪಾಲಕೃಷ್ಣನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 291 (ಪ್ರಾಣಿಗಳಿಗೆ ಸಂಬಂಧಿಸಿದ ನಿರ್ಲಕ್ಷ್ಯದ ನಡವಳಿಕೆ) ಅಡಿಯಲ್ಲಿ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ವಿಚಾರಣೆ ಸದ್ಯ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಮುಂದುವರಿಯುತ್ತಿದೆ.



