ಬೆಂಗಳೂರು: ನಕಲಿ ₹500 ನೋಟು ನೀಡಿ ಸಿಗರೇಟ್ ಖರೀದಿಸಿದ್ದ ಆರೋಪದಡಿ ಎಂಬಿಎ ಪದವೀಧರನೊಬ್ಬನನ್ನು ತುಮಕೂರಿನ ಹುಳಿಯಾರು ಹಾಗೂ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತನನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ 41 ವರ್ಷದ ರುದ್ರೇಶ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಈ ಹಿಂದೆಯೂ ನಕಲಿ ನೋಟು ಮುದ್ರಿಸಿ ಚಲಾವಣೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, 2024ರಲ್ಲಿ ದಾವಣಗೆರೆ ಪೊಲೀಸರು ಆತನನ್ನು ಸೇರಿ ಆರು ಮಂದಿಯನ್ನು ಬಂಧಿಸಿದ್ದರು.
ಜುಲೈ 2ರಂದು ಸ್ನೇಹಿತನೊಂದಿಗೆ ಕಾರಿನಲ್ಲಿ ಬಂದಿದ್ದ ರುದ್ರೇಶ್, ತುಮಕೂರು ಜಿಲ್ಲೆಯ ಹೊಸಹಳ್ಳಿ ಕೈಮಾರ ಸಮೀಪದ ಅಂಗಡಿಯೊಂದರಲ್ಲಿ ಸಿಗರೇಟ್ ಪ್ಯಾಕೆಟ್ ಖರೀದಿಸಿದ್ದ. ಪಾವತಿಗಾಗಿ ₹500 ನೋಟು ನೀಡಿದ್ದು, ಅಂಗಡಿ ಮಾಲಕಿ ಅಂಜನಾ ಶೆಟ್ಟಿ ಅವರು ₹370 ಚಿಲ್ಲರೆ ಹಣವನ್ನು ಹಿಂದಿರುಗಿಸಿದ್ದರು.
ಬಳಿಕ ನೋಟನ್ನು ಪರಿಶೀಲಿಸಿದಾಗ ಅದು ನಕಲಿ ಎಂಬುದು ತಿಳಿದುಬಂದಿದ್ದು, ಅವರು ಕೂಡಲೇ ಹುಳಿಯಾರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳು ನೀಲಿ ಬಣ್ಣದ ಮಾರುತಿ ಆಲ್ಟೋ ಕಾರಿನಲ್ಲಿ ಬಂದಿದ್ದರು ಎಂಬ ಮಾಹಿತಿಯನ್ನೂ ಪೊಲೀಸರಿಗೆ ನೀಡಿದ್ದರು.
ದೂರಿನ ಆಧಾರದ ಮೇಲೆ ವಾಹನದ ಮಾಹಿತಿ ಹಾಗೂ ತಾಂತ್ರಿಕ ಕಣ್ಗಾವಲು ಮೂಲಕ ಪೊಲೀಸರು ಆರೋಪಿಯ ಚಲನವಲನವನ್ನು ಪತ್ತೆಹಚ್ಚಿದರು. ರುದ್ರೇಶ್ ಬೆಂಗಳೂರಿನ ಮಾದನಾಯಕನಹಳ್ಳಿ ವ್ಯಾಪ್ತಿಯಲ್ಲಿರುವುದು ಖಚಿತವಾದ ಬಳಿಕ ಎರಡೂ ಠಾಣೆಗಳ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು.
ಗಂಗೊಂಡನಹಳ್ಳಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ವೇಳೆ ರುದ್ರೇಶ್ ಕುಟುಂಬದವರನ್ನು ಮುಂದೆ ಬಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಬಳಿಕ ಪೊಲೀಸರು ಮನೆ ಪರಿಶೀಲನೆ ನಡೆಸಿದಾಗ ಮಂಚದ ಕೆಳಗೆ ಅಡಗಿಕೊಂಡಿದ್ದ ಆರೋಪಿಯನ್ನು ಬಂಧಿಸಿದರು.
ರುದ್ರೇಶ್ ವಿರುದ್ಧ ಈ ಹಿಂದೆಯೂ ನಕಲಿ ನೋಟು ಚಲಾವಣೆ ಪ್ರಕರಣ ದಾಖಲಾಗಿತ್ತು. 2024ರಲ್ಲಿ ದಾವಣಗೆರೆ ಪೊಲೀಸರು ನಡೆಸಿದ್ದ ಕಾರ್ಯಾಚರಣೆಯಲ್ಲಿ ಆತನೊಂದಿಗೆ ಇನ್ನೂ ಐವರನ್ನು ಬಂಧಿಸಲಾಗಿತ್ತು. ಆಗ ₹200 ಹಾಗೂ ₹500 ಮುಖಬೆಲೆಯ ಒಟ್ಟು ₹7.70 ಲಕ್ಷ ಮೌಲ್ಯದ ನಕಲಿ ನೋಟುಗಳು ಮತ್ತು ₹43 ಸಾವಿರ ಅಸಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಜೈಲಿನಿಂದ ಬಿಡುಗಡೆಯಾದ ಬಳಿಕವೂ ರುದ್ರೇಶ್ ಮತ್ತೆ ನಕಲಿ ನೋಟು ಚಲಾವಣೆಯಲ್ಲಿ ತೊಡಗಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



