ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿದ ಬೆನ್ನಲ್ಲೇ, ಅವರ ಪುತ್ರಿ ಸುಮಾ ಸಾಹುಕಾರ್ ಅವರಿಗೆ ವಿಧಾನಸೌಧ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ಕೆಪಿಎಸ್ಸಿ ಸಹಾಯಕ ಕಾರ್ಯದರ್ಶಿ ನೀಡಿದ ದೂರಿನ ಆಧಾರದ ಮೇಲೆ, ಸರ್ಕಾರಿ ಉದ್ಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ತಂದೆಯ ಪ್ರಭಾವ ಬಳಸಿ ಸುಳ್ಳು ಆದಾಯ ಹಾಗೂ ಜಾತಿ ಪ್ರಮಾಣಪತ್ರ ಸಲ್ಲಿಸಿರುವ ಆರೋಪದಡಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದ ತನಿಖೆಯ ಭಾಗವಾಗಿ ಸುಮಾ ಸಾಹುಕಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿಗೆ ಸುಮಾ ಸಾಹುಕಾರ್ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು. ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ಶುಲ್ಕ ವಿನಾಯಿತಿ ಪಡೆಯುವ ಉದ್ದೇಶದಿಂದ, ತಮ್ಮ ಕುಟುಂಬದ ವಾರ್ಷಿಕ ಆದಾಯವನ್ನು ₹40,000 ಎಂದು ನಮೂದಿಸಿರುವ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ನೇಮಕಾತಿ ಪ್ರಕ್ರಿಯೆಯ ದಾಖಲೆಗಳ ಪರಿಶೀಲನೆ ವೇಳೆ ಸಲ್ಲಿಸಲಾದ ಆದಾಯ ಪ್ರಮಾಣಪತ್ರ ಹಾಗೂ 3ಬಿ ಮೀಸಲಾತಿ ಪ್ರಮಾಣಪತ್ರದಲ್ಲಿ ವಾರ್ಷಿಕ ಆದಾಯ ₹40 ಸಾವಿರ ಎಂದು ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ. ಆದರೆ, ಈ ಮಾಹಿತಿ ವಾಸ್ತವಕ್ಕೆ ವಿರುದ್ಧವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಧಾನಸೌಧ ಪೊಲೀಸರು, ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆಗಾಗಿ ಸುಮಾ ಸಾಹುಕಾರ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ನಿಗದಿತ ದಿನಾಂಕಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.



