HomeIndia Newsಲಾಲೂ ಪ್ರಸಾದ್ ಯಾದವ್ʼಗೆ ಬಿಗ್ ರಿಲೀಫ್: ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ...

ಲಾಲೂ ಪ್ರಸಾದ್ ಯಾದವ್ʼಗೆ ಬಿಗ್ ರಿಲೀಫ್: ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

For Dai;y Updates Join Our whatsapp Group

ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಮೇವು ಹಗರಣ ಪ್ರಕರಣದಲ್ಲಿ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ಪೀಠ ಈ ಮಹತ್ವದ ಆದೇಶ ನೀಡಿದೆ. ಮೇವು ಹಗರಣ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜಾಮೀನು ನೀಡಿದ ಬಳಿಕ ಹಲವು ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಈಗಿರುವ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.

ಇದೇ ವೇಳೆ, 2018ರಿಂದ ಜಾರ್ಖಂಡ್ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಲಾಲೂ ಪ್ರಸಾದ್ ಯಾದವ್ ಅವರ ಕ್ರಿಮಿನಲ್ ಮೇಲ್ಮನವಿಗಳನ್ನು ಮುಂದಿನ ಆರು ತಿಂಗಳೊಳಗೆ ಇತ್ಯರ್ಥಪಡಿಸುವಂತೆ ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಲಾಲೂ ಪ್ರಸಾದ್ ಅವರ ಜೈಲು ಅವಧಿಯ ಲೆಕ್ಕಾಚಾರದಲ್ಲಿ ಹೈಕೋರ್ಟ್ ತಪ್ಪು ಮಾಡಿದೆ ಎಂದು ವಾದಿಸಿದರು. ವಿವಿಧ ಪ್ರಕರಣಗಳ ಶಿಕ್ಷೆಗಳು ಒಂದರ ನಂತರ ಮತ್ತೊಂದು ಜಾರಿಯಾಗಬೇಕಾಗಿದ್ದು, ಆ ಪ್ರಕಾರ ಒಟ್ಟು ಶಿಕ್ಷೆಯ ಅವಧಿ 14 ವರ್ಷಗಳಾಗುತ್ತದೆ. ಹೀಗಾಗಿ ಅರ್ಧ ಶಿಕ್ಷೆ ಪೂರ್ಣಗೊಂಡಿದೆ ಎಂಬ ಆಧಾರದ ಮೇಲೆ ಜಾಮೀನು ನೀಡಿರುವುದು ಕಾನೂನುಬದ್ಧವಲ್ಲ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಇದಕ್ಕೆ ಪ್ರತಿವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಶಿಕ್ಷೆಗಳು ಒಂದರ ನಂತರ ಮತ್ತೊಂದು ಜಾರಿಯಾಗುವ ನಿಯಮವು ಅಂತಿಮ ತೀರ್ಪಿನ ಹಂತದಲ್ಲಿ ಮಾತ್ರ ಅನ್ವಯಿಸುತ್ತದೆ. ಮಧ್ಯಂತರವಾಗಿ ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡುವ ಸಂದರ್ಭದಲ್ಲಿ ಆ ನಿಯಮ ಅನ್ವಯಿಸುವುದಿಲ್ಲ ಎಂದು ವಾದಿಸಿದರು.

ಅಲ್ಲದೆ, 77 ವರ್ಷದ ಲಾಲೂ ಪ್ರಸಾದ್ ಯಾದವ್ ಅವರ ವಯಸ್ಸು ಹಾಗೂ 2022ರಲ್ಲಿ ಅವರು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆರೋಗ್ಯ ಪರಿಸ್ಥಿತಿಯನ್ನೂ ಕಪಿಲ್ ಸಿಬಲ್ ನ್ಯಾಯಾಲಯದ ಗಮನಕ್ಕೆ ತಂದರು.

ಏನಿದು ಮೇವು ಹಗರಣ?

1992ರಿಂದ 1995ರ ಅವಧಿಯಲ್ಲಿ ಅವಿಭಜಿತ ಬಿಹಾರದಲ್ಲಿ ಮೇವು, ಔಷಧ ಹಾಗೂ ಕೃಷಿ ಉಪಕರಣಗಳ ಖರೀದಿ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರಿ ಖಜಾನೆಯಿಂದ ಸುಮಾರು ₹950 ಕೋಟಿ ಅಕ್ರಮವಾಗಿ ಹಣ ಪಡೆದುಕೊಂಡಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೇ ಮೇವು ಹಗರಣ.

ಈ ಪ್ರಕರಣದಲ್ಲಿ ಒಟ್ಟು 55 ಪ್ರಕರಣಗಳು ದಾಖಲಾಗಿದ್ದು, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಚೈಬಾಸಾ, ದಿಯೋಘರ್, ಡುಮ್ಕಾ ಹಾಗೂ ಡೊರಾಂಡಾ ಖಜಾನೆ ವಂಚನೆಗೆ ಸಂಬಂಧಿಸಿದ ಐದು ಪ್ರಕರಣಗಳಲ್ಲಿ ದೋಷಿ ಎಂದು ತೀರ್ಪು ನೀಡಲಾಗಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪಿನೊಂದಿಗೆ ಲಾಲೂ ಪ್ರಸಾದ್ ಯಾದವ್ ಅವರಿಗೆ ಸದ್ಯ ಜಾಮೀನು ಮುಂದುವರಿದಿದ್ದು, ಅವರ ಮೇಲ್ಮನವಿಗಳ ಅಂತಿಮ ವಿಚಾರಣೆ ಜಾರ್ಖಂಡ್ ಹೈಕೋರ್ಟ್‌ನಲ್ಲಿ ಮುಂದುವರಿಯಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img