ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಶೈಲಜಾ ಶ್ರೀಶೈಲನ್ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ನೂರಾರು ಸಿನಿಮಾಗಳು ಮತ್ತು ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದ ಅವರು, ಗುರುವಾರ ಮಧ್ಯಾಹ್ನ ಬೆಂಗಳೂರಿನ ವೈಯ್ಯಾಲಿಕಾವಲ್ ನಿವಾಸದಲ್ಲಿ ಕೊನೆಯುಸಿರೆಳೆದಿದ್ದು, ಚಿತ್ರರಂಗಕ್ಕೆ ಮತ್ತೊಂದು ಅಪಾರ ನಷ್ಟ ಉಂಟಾಗಿದೆ.
ಹಿರಿಯ ನಟ ಶ್ರೀಶೈಲನ್ ಅವರ ಧರ್ಮಪತ್ನಿಯಾಗಿದ್ದ ಶೈಲಜಾ ಶ್ರೀಶೈಲನ್, ಪುತ್ರ ಶ್ರೀಕಾಂತ್ ಹಾಗೂ ಪುತ್ರಿ ಶ್ರೀವಾಣಿ ಅವರನ್ನು ಅಗಲಿದ್ದಾರೆ.
‘ಎ’, ‘ಪುಟ್ಟ ಹೆಂಡ್ತಿ’, ‘ಗೃಹಪ್ರವೇಶ’, ‘ಬಾರೆ ನನ್ನ ಮುದ್ದಿನ ರಾಣಿ’, ‘ಅನಂತನ ಅವಾಂತರ’, ‘ಉಪ್ಪಿ 2’ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು. ನಟ ಉಪೇಂದ್ರ ಅವರ ಬಹುತೇಕ ಸಿನಿಮಾಗಳಲ್ಲಿ ತಾಯಿ ಸೇರಿದಂತೆ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.
ಸಿನಿಮಾ ಮಾತ್ರವಲ್ಲದೆ ‘ಮುಕ್ತ’ ಮತ್ತು ‘ಮಾಯಾಮೃಗ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲೂ ಅಭಿನಯಿಸಿ ಕನ್ನಡ ಕಿರುತೆರೆಯಲ್ಲೂ ತಮ್ಮದೇ ಆದ ಸ್ಥಾನ ನಿರ್ಮಿಸಿಕೊಂಡಿದ್ದರು.
ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರು ನಿಧನರಾಗಿದ್ದು, ಬಳಿಕ ಬೆಂಗಳೂರಿನ ಶ್ರೀರಾಂಪುರ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಹಿರಿಯ ಕಲಾವಿದೆಯ ಅಗಲಿಕೆಗೆ ಚಿತ್ರರಂಗದ ಗಣ್ಯರು, ಸಹ ಕಲಾವಿದರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

