ಚಿಕ್ಕಮಗಳೂರು: NEET ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ಸಿ.ಟಿ. ರವಿ ಅವರು ಪೊಲೀಸರ ನೋಟಿಸ್‌ಗೆ ಉತ್ತರಿಸಲು ಒಂದು ವಾರ ಕಾಲಾವಕಾಶ ಕೋರಿದ್ದಾರೆ.
ಈ ಕುರಿತು ಪೊಲೀಸ್ ಇಲಾಖೆಗೆ ಪತ್ರ ಬರೆದಿರುವ ಸಿ.ಟಿ. ರವಿ, 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯ ಪ್ರಕರಣಗಳಲ್ಲಿ ನೋಟಿಸ್ ನೀಡುವುದು ಕಡ್ಡಾಯವಾಗಿದ್ದು, ಅದಕ್ಕೆ ಸಮಾಜಾಯಿಷಿ ನೀಡಲು 7 ದಿನಗಳ ಕಾಲಾವಕಾಶ ನೀಡುವ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಪೊಲೀಸರು ನೀಡಿರುವ ನೋಟಿಸ್‌ಗೆ ಪ್ರತಿಕ್ರಿಯಿಸಲು ನೀಡಿರುವ ಸಮಯ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿರುವ ಅವರು, ತಾವು ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದು, ಪಕ್ಷದ ಹಲವು ಜವಾಬ್ದಾರಿಗಳಿವೆ ಎಂದು ಹೇಳಿದ್ದಾರೆ.
ಜುಲೈ 29 ಮತ್ತು 30ರಂದು ಪಕ್ಷದ ತುರ್ತು ಕೆಲಸಗಳಿಗಾಗಿ ತೆರಳಬೇಕಿದ್ದು, ರಾಯಚೂರು-ಕೊಪ್ಪಳ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಪರಿಶೀಲನೆಗೆ ಭೇಟಿ ನೀಡಬೇಕಿದೆ. ಬಳಿಕ ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿ ಪೊಲೀಸರಿಗೆ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.
ಜುಲೈ 25ರಂದು ಚಿಕ್ಕಮಗಳೂರಿನಲ್ಲಿ ನಡೆದ ಯೂತ್ ಫಾರ್ ನೇಷನ್ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಡಿ ಸಿ.ಟಿ. ರವಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಈ ಸಂಬಂಧ ಜುಲೈ 26ರಂದು ಪೊಲೀಸರು ನೋಟಿಸ್ ನೀಡಲು ಅವರ ನಿವಾಸಕ್ಕೆ ತೆರಳಿದ್ದರು. ಆದರೆ ನೋಟಿಸ್ ಸ್ವೀಕರಿಸದೆ ಪೊಲೀಸರನ್ನು ವಾಪಸ್ ಕಳುಹಿಸಿದ್ದರು ಎಂದು ತಿಳಿದುಬಂದಿದೆ. ಇದೀಗ ನೋಟಿಸ್‌ಗೆ ಉತ್ತರಿಸಲು ಒಂದು ವಾರ ಕಾಲಾವಕಾಶ ನೀಡುವಂತೆ ಅವರು ಮನವಿ ಮಾಡಿದ್ದಾರೆ.



