ಬೆಂಗಳೂರು: ಮೊಟ್ಟೆ ದರ ಏರಿಕೆಯ ಪರಿಣಾಮ ಸರ್ಕಾರಿ ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮೇಲೂ ಪರಿಣಾಮ ಬೀರಿದೆ.
ಹೆಚ್ಚುವರಿ ಹಣ ಹೊಂದಿಸಲಾಗದೆ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡಲು ಶಿಕ್ಷಕರು ಪರದಾಡುವಂತಾಗಿದೆ.
ಮಾರುಕಟ್ಟೆಯಲ್ಲಿ ಮೊಟ್ಟೆ ದರ ಪ್ರತಿ ಮೊಟ್ಟೆಗೆ 2ರಿಂದ 3 ರೂ.ವರೆಗೆ ಏರಿಕೆಯಾಗಿದೆ. ಆದರೆ ಮೊಟ್ಟೆ ಖರೀದಿಗೆ ಸರ್ಕಾರ ನೀಡುತ್ತಿರುವ ಅನುದಾನ ಹೆಚ್ಚಳವಾಗಿಲ್ಲ. ಈ ಹಿನ್ನೆಲೆಯಲ್ಲಿ ಶಾಲಾ ಹಂತದಲ್ಲಿ ಹಣಕಾಸಿನ ಕೊರತೆ ಎದುರಾಗಿದ್ದು, ಶಿಕ್ಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ರಾಜ್ಯದಲ್ಲಿ 1ರಿಂದ 10ನೇ ತರಗತಿಯ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ ನೀಡಲಾಗುತ್ತಿದೆ. ಸುಮಾರು 55 ಲಕ್ಷ ಮಕ್ಕಳಿಗೆ ಶಿಕ್ಷಣ ಇಲಾಖೆ ಮೂಲಕ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಶಾಲಾ ಹಂತದಲ್ಲಿ ಪ್ರತಿ ಮೊಟ್ಟೆ ಖರೀದಿಗೆ ₹6 ಅನುದಾನ ನೀಡಲಾಗುತ್ತಿದೆ.
ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ₹8ರಿಂದ ₹9ಕ್ಕೆ ಏರಿಕೆಯಾಗಿದೆ. ಹೆಚ್ಚುವರಿ ವೆಚ್ಚವನ್ನು ಭರಿಸಲು ಸರ್ಕಾರದಿಂದ ಯಾವುದೇ ಹೆಚ್ಚುವರಿ ಅನುದಾನ ಲಭ್ಯವಾಗಿಲ್ಲ. ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಸರ್ಕಾರದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ ಎನ್ನಲಾಗಿದೆ.
ಮೊಟ್ಟೆ ಖರೀದಿಗೆ ಹಣದ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಬದಲಾಗಿ ಬಾಳೆಹಣ್ಣು ನೀಡಲಾಗುತ್ತಿದೆ. ಮೊಟ್ಟೆ ದರ ಏರಿಕೆಗೆ ಅನುಗುಣವಾಗಿ ಅನುದಾನ ಹೆಚ್ಚಿಸುವಂತೆ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.



