ಗದಗ: ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ 20ಕ್ಕೂ ಹೆಚ್ಚು ಕಂಪ್ಯೂಟರ್‌ಗಳು ಹಾಗೂ 6 ಎಸಿಗಳು ನಾಪತ್ತೆಯಾಗಿರುವ ಗಂಭೀರ ಆರೋಪದ ನಡುವೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ವಸತಿ ನಿಲಯದ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಗದಗ ನಗರದ ಸೂರ್ಯನಗರದಲ್ಲಿರುವ ವಸತಿ ನಿಲಯಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು, ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ವಿದ್ಯಾರ್ಥಿಗಳು, ಕಲಿಕೆಗೆ ಅಗತ್ಯವಿದ್ದ 20ಕ್ಕೂ ಹೆಚ್ಚು ಕಂಪ್ಯೂಟರ್‌ಗಳು ಮತ್ತು 6 ಎಸಿಗಳನ್ನು ಅಧಿಕಾರಿಗಳೇ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.
ಕಂಪ್ಯೂಟರ್‌ಗಳ ಕೊರತೆಯಿಂದ ಹೊರಗಡೆ ಹಣ ನೀಡಿ ತರಬೇತಿ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು. ವಸತಿ ನಿಲಯದ ಕೊಠಡಿಗಳಲ್ಲಿನ ತಿಗಣೆ ಕಾಟ, ಸ್ವಚ್ಛತೆಯ ಕೊರತೆ, ವಿದ್ಯಾರ್ಥಿಗಳಿಗೆ ಸಮರ್ಪಕ ಊಟ ಹಾಗೂ ಮೂಲಸೌಕರ್ಯಗಳ ಅಭಾವವನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಉಪಲೋಕಾಯುಕ್ತರು, “ಇದು ರಾಜ್ಯದಲ್ಲೇ ಅತ್ಯಂತ ಕೆಟ್ಟ ಹಾಸ್ಟೆಲ್. ನಿಮ್ಮ ಮನೆಯನ್ನೂ ಇದೇ ರೀತಿ ಇಟ್ಟುಕೊಳ್ಳುತ್ತೀರಾ?” ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ, ವಾರ್ಡನ್ ಹಾಗೂ ಅಧಿಕಾರಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
ವಿದ್ಯಾರ್ಥಿಗಳಿಗೆ ಸರ್ಕಾರ ನೀಡಿರುವ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಕಂಪ್ಯೂಟರ್ ಲ್ಯಾಬ್ ಇದ್ದರೂ ಕಂಪ್ಯೂಟರ್‌ಗಳೇ ಇಲ್ಲದಿರುವುದು, ಗ್ರಂಥಾಲಯದಲ್ಲಿ ಪುಸ್ತಕಗಳ ಕೊರತೆ, ಮೂಲಭೂತ ಸೌಲಭ್ಯಗಳ ನಿರ್ಲಕ್ಷ್ಯ ಗಂಭೀರ ವಿಷಯವಾಗಿದೆ ಎಂದು ಹೇಳಿದರು.
ಈ ಎಲ್ಲ ಬೆಳವಣಿಗೆಗಳ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದ ಅವರು, ಉಪನಿರ್ದೇಶಕಿ, ವಾರ್ಡನ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಇಲ್ಲಿಂದ ವರ್ಗಾವಣೆ ಮಾಡುವಂತೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸುವುದಾಗಿಯೂ ಅವರು ಸ್ಪಷ್ಟಪಡಿಸಿದರು. ಈ ಹಾಸ್ಟೆಲ್‌ನಲ್ಲಿನ ಕಂಪ್ಯೂಟರ್ ಹಾಗೂ ಎಸಿ ನಾಪತ್ತೆ, ವಿದ್ಯಾರ್ಥಿಗಳಿಗೆ ಸೌಲಭ್ಯಗಳ ಕೊರತೆ ಮತ್ತು ಆಡಳಿತಾತ್ಮಕ ಅವ್ಯವಸ್ಥೆ ಕುರಿತು ‘ವಿಜಯಸಾಕ್ಷಿ’ ವೆಬ್ ಪೋರ್ಟಲ್ ನಲ್ಲಿ ಬುಧವಾರ ವಿಸ್ತೃತ ವರದಿ ಮಾಡಿತ್ತು.

