ಬೆಂಗಳೂರು: ಆನೇಕಲ್ ತಾಲೂಕಿನ ರಾಮಕೃಷ್ಣಾಪುರದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಿಂದ ಸುಮಾರು 86.65 ಲಕ್ಷ ರೂ. ಮೌಲ್ಯದ ಅಕ್ಕಿ, ಗೋಧಿ ಹಾಗೂ ರಾಗಿಯನ್ನು ಅಕ್ರಮವಾಗಿ ಸಾಗಿಸಿ ಮಾರಾಟ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದಾಸ್ತಾನು ವ್ಯವಸ್ಥಾಪಕ ಸೇರಿದಂತೆ ಆರೋಪಿತ ಸಿಬ್ಬಂದಿ ತಲೆಮರೆಸಿಕೊಂಡಿದ್ದು, ಐವರ ವಿರುದ್ಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾಸ್ತಾನು ವ್ಯವಸ್ಥಾಪಕ ಶಿವಕುಮಾರ್ ಹಾಗೂ ಸಿಬ್ಬಂದಿಗಳಾದ ನಾರಾಯಣಸ್ವಾಮಿ, ತಿಮ್ಮರಾಜು, ರಾಜಕುಮಾರ್ ಮತ್ತು ತೌಸಿಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಗೋದಾಮಿನಲ್ಲಿ ಸಂಗ್ರಹಿಸಿದ್ದ ನೂರಾರು ಕ್ವಿಂಟಲ್ ಅಕ್ಕಿ, ಗೋಧಿ ಮತ್ತು ರಾಗಿಯನ್ನು ಅನಧಿಕೃತವಾಗಿ ಹೊರಗೆ ಸಾಗಿಸಿ ಮಾರಾಟ ಮಾಡಿರುವ ಆರೋಪ ಇವರ ಮೇಲಿದೆ.
ಗೋದಾಮು ಸತತ ಮೂರು ದಿನಗಳ ಕಾಲ ತೆರೆಯದೇ ಇದ್ದ ಕಾರಣ ಅನುಮಾನಗೊಂಡ ಆಹಾರ ಶಿರಸ್ತೇದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಗೋದಾಮಿಗೆ ಬೀಗ ಹಾಕಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಬಳಿಕ ಅಧಿಕಾರಿಗಳು ಗೋದಾಮಿನ ದಾಸ್ತಾನನ್ನು ಪರಿಶೀಲಿಸಿದಾಗ ಅಕ್ಕಿ, ಗೋಧಿ ಹಾಗೂ ರಾಗಿಯ ಪ್ರಮಾಣದಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ. ಗೋದಾಮಿನಲ್ಲಿದ್ದ ದಾಸ್ತಾನನ್ನು ಅಕ್ರಮವಾಗಿ ಹೊರಗೆ ಸಾಗಿಸಿರುವ ಶಂಕೆ ಬಲವಾಗಿದ್ದು, ಒಟ್ಟು 86.65 ಲಕ್ಷ ರೂ. ಮೌಲ್ಯದ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.
ಪ್ರಕರಣ ಬಹಿರಂಗವಾಗುತ್ತಿದ್ದಂತೆ ಆರೋಪಿತ ಅಧಿಕಾರಿ ಹಾಗೂ ಸಿಬ್ಬಂದಿ ತಲೆಮರೆಸಿಕೊಂಡಿದ್ದಾರೆ. ಸೂರ್ಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಹಾಗೂ ಅಕ್ರಮ ದಾಸ್ತಾನು ಸಾಗಾಟದ ಸಂಪೂರ್ಣ ಜಾಲದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.



