HomeIndia Newsಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ರಾಜೀನಾಮೆ!

ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ರಾಜೀನಾಮೆ!

For Dai;y Updates Join Our whatsapp Group

ಮುಂಬೈ: ಟಾಟಾ ಸನ್ಸ್ ಕಾರ್ಯಾಧ್ಯಕ್ಷ ಎನ್. ಚಂದ್ರಶೇಖರನ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ಪ್ರಸ್ತುತ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ಮರುನೇಮಕಗೊಳ್ಳಲು ತಾನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಗಸ್ಟ್ 18ರಂದು ನಡೆಯಲಿರುವ ಟಾಟಾ ಸನ್ಸ್ ವಾರ್ಷಿಕ ಸಾಮಾನ್ಯ ಸಭೆ (AGM)ಗೂ ಮುನ್ನ ಈ ಮಹತ್ವದ ಬೆಳವಣಿಗೆ ನಡೆದಿದೆ.

ಚಂದ್ರಶೇಖರನ್ ಅವರ ಪ್ರಸ್ತುತ ಅಧಿಕಾರಾವಧಿ 2027ರ ಫೆಬ್ರವರಿವರೆಗೆ ಇದೆ. ಆಗಸ್ಟ್ 18ರ ಎಜಿಎಂನಲ್ಲಿ ಅವರ ಮರುನೇಮಕದ ಕುರಿತು ಷೇರುದಾರರು ಮತದಾನ ಮಾಡಬೇಕಿತ್ತು. ಆದರೆ ಈ ಪ್ರಕ್ರಿಯೆ ನಡೆಯುವ ಮೊದಲೇ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿದ್ದರೂ, ಅವರ ಪ್ರಸ್ತುತ ಅಧಿಕಾರಾವಧಿ ಮುಗಿಯುವವರೆಗೆ ಅಂದರೆ 2027ರ ಫೆಬ್ರವರಿವರೆಗೆ ಅವರು ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಟಾಟಾ ಸಮೂಹದ ದತ್ತಿ ಸಂಸ್ಥೆಯಾದ ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಅವರು ಚಂದ್ರಶೇಖರನ್ ಅವರ ಮರುನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಬೋರ್ಡ್‌ನಲ್ಲಿ ಪ್ರಾತಿನಿಧ್ಯ, ಟಾಟಾ ಸನ್ಸ್‌ನ ಸಾಲ ಕಡಿತ, ಸಂಸ್ಥೆಯನ್ನು ಸಾರ್ವಜನಿಕ ಷೇರು ಮಾರುಕಟ್ಟೆಗೆ ತರದಿರುವುದು ಹಾಗೂ ಶಾಪೂರ್ಜಿ ಪಲ್ಲೊಂಜಿ ಸಮೂಹದೊಂದಿಗಿನ ವಿವಾದಗಳನ್ನು ಬಗೆಹರಿಸುವ ವಿಚಾರ ಸೇರಿದಂತೆ ಹಲವು ವಿಷಯಗಳಲ್ಲಿ ಟಾಟಾ ಟ್ರಸ್ಟ್ಸ್ ಮತ್ತು ಟಾಟಾ ಸನ್ಸ್ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದವು ಎಂದು ತಿಳಿದುಬಂದಿದೆ.

ಚಂದ್ರಶೇಖರನ್ ಅವರ ರಾಜೀನಾಮೆಯ ಬೆನ್ನಲ್ಲೇ ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿ ವಿಜಯ್ ಸಿಂಗ್ ಕೂಡ ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನವೇ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೆ, ಮರುನೇಮಕಗೊಳ್ಳಲು ತಾವು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರಿಂದ ಟಾಟಾ ಸಮೂಹದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ಕುರಿತು ಚರ್ಚೆ ಆರಂಭವಾಗಿದೆ.

1987ರಲ್ಲಿ ಟಾಟಾ ಸಮೂಹವನ್ನು ಸೇರಿದ ಎನ್. ಚಂದ್ರಶೇಖರನ್, 2009ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (TCS) ಸಿಇಒ ಆಗಿ ನೇಮಕಗೊಂಡಿದ್ದರು. ಬಳಿಕ 2017ರಲ್ಲಿ ದಿವಂಗತ ರತನ್ ಟಾಟಾ ಅವರ ಮಾರ್ಗದರ್ಶನದಲ್ಲಿ ಟಾಟಾ ಸನ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಟಾಟಾ ಕುಟುಂಬಕ್ಕೆ ಸೇರದ ವ್ಯಕ್ತಿಯೊಬ್ಬರು ಟಾಟಾ ಸಮೂಹದ ಅತ್ಯುನ್ನತ ಹುದ್ದೆಗೇರಿದ್ದು ಇದೇ ಮೊದಲ ಬಾರಿಯಾಗಿತ್ತು.

ಸೆಮಿಕಂಡಕ್ಟರ್ ಚಿಪ್ ತಯಾರಿಕೆ ಸೇರಿದಂತೆ ಹಲವು ಪ್ರಮುಖ ಹಾಗೂ ಬಹುಕೋಟಿ ರೂಪಾಯಿ ಮೌಲ್ಯದ ಉದ್ಯಮ ಯೋಜನೆಗಳಲ್ಲಿ ಟಾಟಾ ಸಮೂಹ ತೊಡಗಿಸಿಕೊಂಡಿರುವ ಸಂದರ್ಭದಲ್ಲಿ ಚಂದ್ರಶೇಖರನ್ ಅವರ ನಿರ್ಗಮನ ಮಹತ್ವ ಪಡೆದುಕೊಂಡಿದೆ.

ಅವರ ರಾಜೀನಾಮೆ ಟಾಟಾ ಸನ್ಸ್‌ನ ಭವಿಷ್ಯದ ಆಡಳಿತ ಶೈಲಿ, ಬೋರ್ಡ್ ರಚನೆ ಹಾಗೂ ಸಮೂಹದ ಪ್ರಮುಖ ವ್ಯವಹಾರಿಕ ನಿರ್ಧಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಟಾಟಾ ಸನ್ಸ್‌ನ ಹೊಸ ನಾಯಕತ್ವದ ಆಯ್ಕೆ ಕುರಿತು ಕುತೂಹಲ ಹೆಚ್ಚಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img