ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನಲ್ಲೇ ಮೊಬೈಲ್ ಬಳಕೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಇಲಾಖಾ ತನಿಖೆಯಲ್ಲಿ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾಗಿದ್ದ ಬಳಿಕ, ಜೈಲಿನೊಳಗೆ ಅವರು ಮೊಬೈಲ್ ಬಳಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ವಿಡಿಯೋ ಇತ್ತೀಚೆಗೆ ರೆಕಾರ್ಡ್ ಮಾಡಿದ್ದಲ್ಲ ಎಂಬುದು ಇಲಾಖಾ ತನಿಖೆಯಲ್ಲಿ ತಿಳಿದುಬಂದಿದೆ. 2024ರ ಸೆಪ್ಟೆಂಬರ್ನಲ್ಲೇ ಪ್ರಜ್ವಲ್ ರೇವಣ್ಣ ಜೈಲಿನೊಳಗೆ ಮೊಬೈಲ್ ಬಳಸುತ್ತಿದ್ದಾಗ ಅವರ ರೂಮ್ಮೇಟ್ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದ ಎನ್ನಲಾಗಿದೆ. ಇದೀಗ ಇದೇ ಹಳೆಯ ವಿಡಿಯೋ ವೈರಲ್ ಆಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
2024ರಿಂದಲೇ ಮೊಬೈಲ್ ಬಳಕೆ ಆರೋಪ
ಇಲಾಖಾ ತನಿಖೆಯ ಮಾಹಿತಿಯ ಪ್ರಕಾರ, ಪ್ರಜ್ವಲ್ ರೇವಣ್ಣ 2024ರಿಂದಲೇ ಜೈಲಿನೊಳಗೆ ಮೊಬೈಲ್ ಬಳಸುತ್ತಿದ್ದರು ಎನ್ನಲಾಗಿದೆ. ಸೆಪ್ಟೆಂಬರ್ 2024ರಲ್ಲಿ ಅವರು ಮೊಬೈಲ್ ಬಳಸುತ್ತಿದ್ದ ದೃಶ್ಯವನ್ನು ರೂಮ್ಮೇಟ್ ಸೆರೆಹಿಡಿದಿದ್ದ ಎನ್ನಲಾಗಿದ್ದು, ಇದೇ ವಿಡಿಯೋ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದರ ಬೆನ್ನಲ್ಲೇ ಜೈಲಿನೊಳಗೆ ಅಧಿಕಾರಿಗಳು ನಡೆಸಿದ ದಾಳಿ ಹಾಗೂ ತಪಾಸಣೆಗಳ ಬಗ್ಗೆಯೂ ತನಿಖೆಯಲ್ಲಿ ಮಾಹಿತಿ ಹೊರಬಿದ್ದಿದೆ. ಜೈಲು ಅಧಿಕಾರಿಗಳು ಪದೇಪದೇ ದಾಳಿ ನಡೆಸಿದರೂ, ಸಿಬ್ಬಂದಿಯ ಸಹಾಯದಿಂದ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆಯಿಂದ ತಪ್ಪಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಈ ರೀತಿಯ ದಾಳಿಗಳಿಂದ ಅವರು ಒಂದಲ್ಲ, ಎರಡಲ್ಲ, ಒಟ್ಟು ಆರು ಬಾರಿ ತಪ್ಪಿಸಿಕೊಂಡಿದ್ದರು ಎಂಬ ಅಂಶವೂ ಇಲಾಖಾ ತನಿಖೆಯಲ್ಲಿ ಬಹಿರಂಗವಾಗಿದೆ.
ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನೊಳಗೆ ಮೊಬೈಲ್ ಬಳಕೆಗೆ ಹೇಗೆ ಅವಕಾಶ ಸಿಕ್ಕಿತು, ದಾಳಿಗಳ ಸಂದರ್ಭದಲ್ಲೂ ಅವರು ಹೇಗೆ ಪಾರಾಗುತ್ತಿದ್ದರು ಹಾಗೂ ಇದರಲ್ಲಿ ಜೈಲು ಸಿಬ್ಬಂದಿಯ ಪಾತ್ರವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.



