HomeBengaluru Newsಕರ್ತವ್ಯದಲ್ಲಿದ್ದ PSIಗೆ ಕಪಾಳಮೋಕ್ಷ: ಪುತ್ರಿಯ ವರ್ತನೆಗೆ ಶಾಸಕ ಸುರೇಶ್ ಗೌಡ ಸಾರ್ವಜನಿಕ ಕ್ಷಮೆಯಾಚನೆ

ಕರ್ತವ್ಯದಲ್ಲಿದ್ದ PSIಗೆ ಕಪಾಳಮೋಕ್ಷ: ಪುತ್ರಿಯ ವರ್ತನೆಗೆ ಶಾಸಕ ಸುರೇಶ್ ಗೌಡ ಸಾರ್ವಜನಿಕ ಕ್ಷಮೆಯಾಚನೆ

For Dai;y Updates Join Our whatsapp Group

ಬೆಂಗಳೂರು: ಕರ್ತವ್ಯದಲ್ಲಿದ್ದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಪುತ್ರಿ ಐಶ್ವರ್ಯಾ ಅವರ ವರ್ತನೆಗೆ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಘಟನೆ ನಡೆದ ಸಂದರ್ಭದಲ್ಲಿ ವಾಸ್ತವವಾಗಿ ಏನಾಯಿತು ಎಂಬುದು ತಮಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದು ಹೇಳಿದ್ದಾರೆ.

ಶಾಸಕರ ಹೇಳಿಕೆಯ ಪ್ರಕಾರ, ಭೀಮನ ಅಮಾವಾಸ್ಯೆಯಂದು ಅವರ ಪುತ್ರಿ ಇಬ್ಬರು ಸಣ್ಣ ಮಕ್ಕಳೊಂದಿಗೆ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನಕ್ಕೆ ತೆರಳಿದ್ದರು. ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿದ್ದ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಪಿಎಸ್‌ಐ ಅವರನ್ನು ಒಳಗೆ ಬಿಡಲಿಲ್ಲ ಎನ್ನಲಾಗಿದೆ. ವಿಐಪಿ ಸಾಲಿನಲ್ಲಿ ನಿಂತಿದ್ದಾಗ ಬೇರೆಯವರನ್ನು ಒಳಗೆ ಬಿಡಲಾಗಿದೆ ಎಂಬ ವಿಚಾರದಿಂದ ಅಸಮಾಧಾನ ಉಂಟಾಗಿ, ಮಾತಿಗೆ ಮಾತು ಬೆಳೆದು ಘಟನೆ ನಡೆದಿರಬಹುದು ಎಂದು ಸುರೇಶ್ ಗೌಡ ಹೇಳಿದ್ದಾರೆ.

ಘಟನೆಯಲ್ಲಿ ತಮ್ಮ ಪುತ್ರಿಯ ಕಡೆಯ ದೂರನ್ನೂ ಪೊಲೀಸರು ಆಲಿಸಬೇಕಿತ್ತು ಎಂದು ಶಾಸಕ ಹೇಳಿದ್ದಾರೆ. ಈ ಕುರಿತು ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ.

ಪುತ್ರಿಯ ತಪ್ಪು ಸಾಬೀತಾದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಸಿದ್ಧ ಎಂದು ಹೇಳಿದ ಸುರೇಶ್ ಗೌಡ, ಆ ಕ್ಷಣದಲ್ಲಿ ಐಶ್ವರ್ಯಾ ತಾಳ್ಮೆ ಕಳೆದುಕೊಂಡಿರಬಹುದು ಎಂದಿದ್ದಾರೆ. ಆದರೆ ಸಾರ್ವಜನಿಕ ಜೀವನದಲ್ಲಿರುವವರು ಈ ರೀತಿಯ ವರ್ತನೆ ತೋರಬಾರದು. ಹೀಗಾಗಿ ತಮ್ಮ ಪುತ್ರಿಯ ವರ್ತನೆಗಾಗಿ ತಾವೇ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ದೇವಸ್ಥಾನದಲ್ಲಿ ನಡೆದಿದ್ದೇನು?

ಆಗಸ್ಟ್ 12ರಂದು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಾಸಕರ ಪುತ್ರಿ ಐಶ್ವರ್ಯಾ ಪ್ರಭಾವ ಬಳಸಿ ವಿಐಪಿ ಪ್ರವೇಶ ಪಡೆದಿದ್ದರು ಎಂದು ಆರೋಪಿಸಲಾಗಿದೆ.

ಗರ್ಭಗುಡಿ ಸಮೀಪಕ್ಕೆ ತೆರಳಿ ಒಳಗೆ ಬಿಡುವಂತೆ ಅವರು ಕೇಳಿದಾಗ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇರುವುದರಿಂದ ಆ ಕ್ಷಣದಲ್ಲಿ ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಪಿಎಸ್‌ಐ ಸವಿತಾ ತಿಳಿಸಿದ್ದರು. ನಿಮ್ಮನ್ನು ಒಳಗೆ ಬಿಟ್ಟರೆ ಸಾಲಿನಲ್ಲಿ ನಿಂತಿರುವ ಭಕ್ತರಿಂದ ಗಲಾಟೆಯಾಗುವ ಸಾಧ್ಯತೆಯಿದೆ. ಹೀಗಾಗಿ ಸ್ವಲ್ಪ ಸಮಯ ಕಾಯುವಂತೆ ಅವರು ಸೂಚಿಸಿದ್ದರು ಎನ್ನಲಾಗಿದೆ.

ಇದೇ ವೇಳೆ ಮಫ್ತಿಯಲ್ಲಿದ್ದ ಸರ್ಕಲ್ ಇನ್‌ಸ್ಪೆಕ್ಟರ್ ಲಕ್ಷ್ಮಿ ಗರ್ಭಗುಡಿಯತ್ತ ತೆರಳಿದಾಗ, ಐಶ್ವರ್ಯಾ ಅದನ್ನು ಪ್ರಶ್ನಿಸಿದ್ದಾರೆ. ಅವರು ಕರ್ತವ್ಯದಲ್ಲಿರುವ ಸರ್ಕಲ್ ಇನ್‌ಸ್ಪೆಕ್ಟರ್ ಎಂದು ಪಿಎಸ್‌ಐ ಸವಿತಾ ಸ್ಪಷ್ಟಪಡಿಸಿದ್ದರು.

ಆದರೂ ಒಳಗೆ ಹೋಗಲು ಅವಕಾಶ ನೀಡುವಂತೆ ಐಶ್ವರ್ಯಾ ಒತ್ತಾಯಿಸಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈ ವೇಳೆ ಪಿಎಸ್‌ಐ ಸವಿತಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪಿಎಸ್‌ಐ ಸವಿತಾ ನೀಡಿದ ದೂರಿನ ಆಧಾರದ ಮೇಲೆ ಶ್ರೀರಂಗಪಟ್ಟಣ ತಾಲೂಕಿನ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img